ಬಾಗಲಕೋಟೆ: ಲೋಕಸಭಾ ಚುನಾವಣೆಯ ಮತದಾನ ನಡೆದ ದಿನವೇ ಪ್ರಾಣಿ ಬಲಿ ನಡೆದಿದ್ದು, ಚುನಾವಣೆಯ ಗುಂಗಿನಲ್ಲಿದ್ದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕುರುಡಾಗಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಪ್ರಾಣಿ ಬಲಿ ನಿಷೇಧ ಕಾಯ್ದೆ ಇದ್ದರೂ, ಬಾಗಲಕೋಟೆ ಜಿಲ್ಲೆಯ ಮಂಗಳಗುಡ್ಡ ಗ್ರಾಮದಲ್ಲಿ ಮೂರು ವರ್ಷಕ್ಕೂಮ್ಮೆ ನಡೆಯುವ ದೇವಿ ಜಾತ್ರೆಯ ಹೆಸರಿನಲ್ಲಿ ಪ್ರಾಣಿಗಳ ಮಾರಣ ಹೋಮ ನಡೆಯುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.
ಬಾದಾಮಿ ತಾಲೂಕಿನ ಮಂಗಳಗುಡ್ಡ ಗ್ರಾಮದಲ್ಲಿಮಂಗಳಾ ದೇವಿಯ ಹೆಸರಿನಲ್ಲಿ ಕೋಣಗಳನ್ನು ಬಲಿ ಕೊಡುವ ಪದ್ದತಿ ಹಿಂದಿನಿಂದಲೂ ಬಂದಿದೆ. ದೇವಸ್ಥಾನದ ಮುಂದೆ ಇರುವ ಪಾದಗಟ್ಟೆಯಲ್ಲಿ ಸಾಮೂಹಿಕವಾಗಿ ಸುಮಾರು 80 ರಿಂದ 100 ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಈಗಲೂ ಇಂತಹ ಮೂಢನಂಬಿಕೆ ಮುಂದುವರೆದಿದ್ದು ಬೇಸರದ ಸಂಗತಿ.
ಚುನಾವಣೆ ಹಿನ್ನೆಲೆ ಏಪ್ರಿಲ್ 23 ರಂದು ಜಿಲ್ಲೆಯಲ್ಲಿ ನಡೆಯುವ ಸಂತೆ, ಜಾತ್ರೆಗಳನ್ನು ಜಿಲ್ಲಾಡಳಿತ ನಿಷೇಧ ಮಾಡಿದ್ದರೂ, ಬಾದಾಮಿ ತಾಲೂಕಿನ ಮಂಗಳಗುಡ್ಡ ಗ್ರಾಮದಲ್ಲಿ ಜಾತ್ರೆ ನಡೆದಿದೆ. ಎಲ್ಲರೂ ಒಂದೆಡೆ ನಿಂತು ಕೋಣವನ್ನು ಸಾಮೂಹಿಕವಾಗಿ ಬಲಿ ಕೊಟ್ಟಿರೋ ದೃಶ್ಯ ಈಗ ವೈರಲಾಗಿದೆ.
ಇಲ್ಲಿ ಕೋಣವನ್ನು ದೇವಿಯ ಹೆಸರಿನಲ್ಲಿ ಬಲಿ ನೀಡಿ, ಎತ್ತಿನ ಚಕ್ಕಡಿ ಮೇಲೆ ಹಾಕಿಕೊಂಡು ಹೋಗುತ್ತಾರೆ. ಇಂತಹ ಪ್ರಾಣಿ ಬಲಿ ನಿಷೇಧ ಇದ್ದರೂ, ಇಲ್ಲಿ ಯಾವುದೇ ಕಾನೂನು, ಕಟ್ಟಲೆ ಇಲ್ಲ ಎಂಬಂತೆ ಭಾಸವಾಗುತ್ತಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೊಣೆಯಾಗಿದ್ದು, ಕಣ್ಣುಮುಚ್ಚಿ ಕುಳಿತಕೊಂಡಿರುವ ಅಧಿಕಾರಗಳ ವಿರುದ್ದ ಪ್ರಜ್ಞಾವಂತರು ಆಕ್ರೋಶಗೊಂಡಿದ್ದಾರೆ.