ಬಾಗಲಕೋಟೆ: ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ಮೂರನೇಯ ಸ್ಥಾನ ಪಡೆದುಕೊಂಡಿರುವ ವಿದ್ಯಾರ್ಥಿ ಬಾಹ್ಯಾಕಾಶ ಸಂಶೋಧನೆ ಮಾಡುವ ವಿಜ್ಞಾನಿ ಆಗಬೇಕು ಎಂಬ ಉನ್ನತ ಗುರಿಯನ್ನು ಇಟ್ಟಿಕೊಂಡಿದ್ದಾನೆ.
ಬೀಳಗಿ ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದಿದ ಆನಂದ ಹೊಸಮನೆ ಎಂಬುವ ವಿದ್ಯಾರ್ಥಿ 625ಕ್ಕೆ 623 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇಯ ಸ್ಥಾನ ಪಡೆದುಕೊಂಡರೆ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ಮೂಲತಃ ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನ ಗರಸಂಗಿ ಗ್ರಾಮದ ನಿವಾಸಿಯಾಗಿರುವ ಈ ವಿದ್ಯಾರ್ಥಿ, ತಂದೆಯನ್ನು ಕಳೆದುಕೊಂಡಿದ್ದಾನೆ. ತಾಯಿ ಯಮುನಾಬಾಯಿ ಹೊಲಿಗೆ ಯಂತ್ರದ ಮೂಲಕ ಮೂರು ಮಕ್ಕಳನ್ನು ಸಾಕುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಅಕ್ಕ ಹಾಗೂ ತಮ್ಮ ಇದ್ದಾರೆ. ಕಷ್ಟಪಟ್ಟು ಅಧ್ಯಯನ ಮಾಡುವ ಛಲ ಹೊಂದಿರುವುದರಿಂದ ಇಷ್ಟೊಂದು ಅಂಕಗಳನ್ನು ಪಡೆಯುವುದಕ್ಕೆ ಸಾಧ್ಯವಾಯಿತು ಎಂದು ವಿದ್ಯಾರ್ಥಿ ಹೇಳಿದ್ದಾನೆ. ಬಾಹ್ಯಾಕಾಶ ಸಂಶೋಧನೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಮುಂದೆ ವಿಜಯಪುರದಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಅಧ್ಯಯನ ಮಾಡಿ, ಬಾಹ್ಯಾಕಾಶ ವಿಜ್ಞಾನಿ ಆಗಬೇಕು ಎಂಬ ಗುರಿ ಇಟ್ಟುಕೊಂಡಿದ್ದಾನೆ.