ಬಾಗಲಕೋಟೆ: ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ, ಮತದಾನದ ಮಹತ್ವ ಹಾಗು ನಾಯಕತ್ವದ ಗುಣಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಂದಲೇ ಮತದಾನ ಮಾಡಿಸುವ ಮೂಲಕ ಬಾದಾಮಿ ತಾಲೂಕಿನ ಗೋವನಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆಯಂತೆ ಮಕ್ಕಳ ಸಂಸತ್ ಚುನಾವಣೆ ನಡೆಸಲಾಯಿತು. ಮಂತ್ರಿಮಂಡಲ ರಚನೆಗೆ ಪ್ರೌಢ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ 18 ವಿದ್ಯಾರ್ಥಿಗಳು ಅಂತಿಮ ಸ್ಪರ್ಧಾಳುಗಳಾಗಿ ಕಣದಲ್ಲುಳಿದು ಪ್ರಚಾರ ನಡೆಸಿದರು. 8, 9 ಹಾಗು 10ನೇ ತರಗತಿಯ 235 ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಹೀಗಿತ್ತು ಚುನಾವಣೆ: ತಮ್ಮ ಗುರುತಿನ ಚಿಟಿ ಮೂಲಕ ಮತಗಟ್ಟೆಗೆ ಆಗಮಿಸಿದ ವಿದ್ಯಾರ್ಥಿಗಳು ಸರತಿ ಸಾಲಲ್ಲಿ ನಿಂತು ಬ್ಯಾಲೆಟ್ ಪೇಪರ್ ಪಡೆದು ತಮ್ಮ ನಾಯಕರ ಪರ ಗುಪ್ತ ಮತದಾನ ಮಾಡಿದರು. ಈ ಮೂಲಕ ಎಳೆಯ ವಯಸ್ಸಿನಲ್ಲೇ ಮಕ್ಕಳು ಮತದಾನ ಹಾಗೂ ಚುನಾವಣೆಯ ಅರಿವು ಪಡೆದುಕೊಂಡರು. ಚುನಾವಣಾಧಿಕಾರಿಗಳಾಗಿ ಶಿಕ್ಷಕ ಎಂ.ಸಿ. ಸಾಲಿ, ಪಿಆರ್‌ಒಗಳಾಗಿ ಎಸ್.ವೈ. ಪಾಟೀಲ, ಪೋಲಿಂಗ್ ಅಧಿಕಾರಿಗಳಾಗಿ ಶಿಕ್ಷಕಿ ಡಿ.ಎಂ. ಹಳ್ಳೂರ, ಶಿಕ್ಷಕ ಎಸ್.ಆರ್. ಪಾಟೀಲ, ದೈಹಿಕ ಶಿಕ್ಷಕಿ ಅನೀತಾ ಸಿಂಗ್ ವೀಕ್ಷಣಾಧಿಕಾರಿಗಳಾಗಿ ಪಿ.ಸಿ. ಪಮ್ಮಾರ, ಸಂಚಾಲಕರಾಗಿ ಎಂ.ಐ. ಬಾಗಲಕೋಟ ಕರ್ತವ್ಯ ನಿರ್ವಹಿಸಿ ಚುನಾವಣೆಯನ್ನು ಯಶಸ್ವಿಗೊಳಿಸಿದರು.
ಶಿಕ್ಷಕಿ ಡಿ.ಎಂ. ಹಳ್ಳೂರ ಬ್ಯಾಲೆಟ್ ಪೇಪರ್ ಕೊಟ್ಟು ಮತದಾನ ಮಾಡುವವರ ಸಹಿ ಹಾಕಿಸಿಕೊಳ್ಳುತ್ತಿದ್ದರು. ದೈಹಿಕ ಶಿಕ್ಷಕಿ ಅನೀತಾ ಸಿಂಗ್ ಅವರು ವಿದ್ಯಾರ್ಥಿಗಳ ಬೆರಳಿಗೆ ಮಾರ್ಕರ್‌ನಿಂದ ಶಾಹಿ ಗುರುತು ಹಾಕುತ್ತಿದ್ದರು. ಸೋಮವಾರ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಿಕ್ಷಣ/ ಆರೋಗ್ಯ/ ಹಣಕಾಸು/ ಕೃಷಿ ಸೇರಿದಂತೆ ಎಲ್ಲ ಖಾತೆಗಳಿಗೆ ಸಚಿವರಾಗಿ ವಿದ್ಯಾರ್ಥಿಗಳು ಆಯ್ಕೆಯಾಗಲಿದ್ದಾರೆ.
ಮಕ್ಕಳಿಗೆ ವ್ಯಾಪಾರ- ವ್ಯವಹಾರದ ಪಾಠ: ಶಿವಮೊಗ್ಗದಲ್ಲಿ ಇತ್ತೀಚೆಗೆ ಶಾಲೆಯ ಮಕ್ಕಳಿಗೆ ಸಾಮಾನ್ಯ ಜ್ಞಾನ ಸಿಗಬೇಕೆಂದು ಸಂತೆ ವ್ಯಾಪಾರ, ವಹಿವಾಟು ಕಲಿಸುವ ಉದ್ದೇಶದಿಂದ ದುರ್ಗಿಗುಡಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮೆಟ್ರಿಕ್ ಮೇಳವನ್ನು ಶಿಕ್ಷಕರು ಆಯೋಜಿಸಿದ್ದರು. ಮಾರುಕಟ್ಟೆ ಹೇಗಿರುತ್ತದೆ, ವ್ಯಾಪಾರ ಹೇಗೆ ನಡೆಯುತ್ತದೆ, ವ್ಯಾಪಾರ ವಹಿವಾಟು ಪಠ್ಯಕ್ಕೆ ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ಸ್ವತಃ ಅವರೇ ಅನುಭಿಸಲು ಮೆಟ್ರಿಕ್ ಮೇಳ ಸಂತೆಯನ್ನು ಆಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳ ತಂಡ ರಚನೆ ಮಾಡಿ ಅವರಿಗೆ ಒಂದೂಂದು ವ್ಯಾಪಾರ ಮಾಡಲು ಸೂಚನೆ ನೀಡಲಾಗಿತ್ತು. ಇದರಲ್ಲಿ ಸೊಪ್ಪು, ತರಕಾರಿ, ಬ್ಯಾಂಗಲ್ಸ್, ರೆಡಿಮೇಡ್ ತಿಂಡಿ ಸೇರಿದಂತೆ ಇತರ ವಸ್ತುಗಳನ್ನು ಮಾರಾಟಕ್ಕಿಡಲಾಗಿತ್ತು.
ಇದನ್ನೂ ಓದಿ: ಶಾಲಾ ಮಕ್ಕಳಿಗೆ ದೈನಂದಿನ ಪಾಠದ ಜೊತೆಗೆ ವ್ಯಾಪಾರದ ಜ್ಞಾನಕ್ಕಾಗಿ ನಡೆದ ಮೆಟ್ರಿಕ್ ಮೇಳ