ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ನಿಂತರೂ ಸೋಲುತ್ತಾರೆ. ಬಾದಾಮಿ ಮತ ಕ್ಷೇತ್ರದಲ್ಲಿ ಸೋಲು ಖಚಿತ ಎನ್ನುವುದನ್ನು ಅರಿತು ಬಾದಾಮಿ ಬಿಟ್ಟು ಹೋಗಿದ್ದಾರೆ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, ಬಾದಾಮಿಯ ಆಂತರಿಕ ಸರ್ವೇಯಲ್ಲಿ ಸೋಲು ಎಂಬ ಮಾಹಿತಿ ಇದೆ. ಈ ಹಿನ್ನೆಲೆ ಬಾದಾಮಿ ಬಿಟ್ಟು ಹೋಗಿದ್ದಾರೆ. ಸಿದ್ದರಾಮಯ್ಯನವರ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ. ಆದರೆ ಕಾಂಗ್ರೆಸ್ ಪಕ್ಷದವರೇ ಸೋಲುವಂತೆ ಮಾಡುತ್ತಾರೆ ಎಂದರು.
ಇದೇ ಸಮಯದಲ್ಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಮ್ಮ ಸರ್ಕಾರ ಎಲ್ಲ ಸಮಾಜದವರಿಗೆ ಅನುಕೂಲ ಮಾಡಿದೆ. ಎಲ್ಲರ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷ ಹೆಚ್ಚು ಒತ್ತು ನೀಡುತ್ತಿದೆ. ವಿರೋಧ ಮಾಡುವ ಕಾಂಗ್ರೆಸ್ ಪಕ್ಷದವರು, ಮೀಸಲಾತಿ ವಿಚಾರವಾಗಿ ಸಮಗ್ರ ಮಾಹಿತಿ ತಿಳಿದುಕೊಂಡು ಮಾತನಾಡಬೇಕು ಎಂದು ನಿರಾಣಿ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ-ನಿರಾಣಿ: ಮುಂದೆ ನಮ್ಮ ಸರ್ಕಾರ ಬಂದಾಗ ಈಗ ಜಾರಿಗೆ ತಂದಿರುವ ಎಲ್ಲಾ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರಕ್ಕೆ ಬರಲ್ಲ. ಇನ್ನೂ ಬದಲಾವಣೆ ಏನು ಮಾಡುತ್ತಾರೆ. ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆದರೂ ತಪ್ಪೇನು ಇದೆ. ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಅವರೇ ಮುಖ್ಯಮಂತ್ರಿ ಆದಲ್ಲಿ ಏನೂ ತಪ್ಪಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಲಕುರ್ಕಿ 2000 ಏಕರೆ ಜಮೀನು ಭೂಸ್ವಾಧೀನ: ವರುಣಾ ಕ್ಷೇತ್ರದಲ್ಲಿ ಬಿ ವೈ ವಿಜಯೇಂದ್ರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರಾಣಿ ಅವರು, ಬಿಜೆಪಿ ಪಕ್ಷದ ಹೈಕಮಾಂಡ್ ಹಾಗೂ ಬಿಜೆಪಿ ಪಕ್ಷದ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆ ಬಗ್ಗೆ ನಾನು ಚಿಕ್ಕವನು ಎಂದರು.
ಹಲಕುರ್ಕಿ ಗ್ರಾಮದಲ್ಲಿ 2000 ಏಕರೆ ಜಮೀನು ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಸರ್ಕಾರದ ಜಮೀನು 380 ಎಕರೆ ಇದ್ದು, ಉಳಿದವರು ಈಗಾಗಲೇ ಒಪ್ಪಿಗೆ ಪತ್ರ ನೀಡಿಲಾಗಿದೆ. ಜಮೀನು ಇಲ್ಲದವರು ವಿರೋಧ ಮಾಡುತ್ತಿದ್ದಾರೆ. ಮುಧೋಳದವರು ಬಂದು ಏಕೆ ಹೋರಾಟ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಮುಂದಿನ 20 ವರ್ಷದಲ್ಲಿ ರೈತರಿಗೆ ಹಾಗೂ ಜನರಿಗೆ ಸಮರ್ಪಕ ವಿದ್ಯುತ್ ಕೂಡಲಾಗುವುದು. ರಸ್ತೆ ಅಭಿವೃದ್ಧಿ, ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ 3 ಕೋಟಿ ವೆಚ್ಚದಲ್ಲಿ ಸ್ವಂತ ಹಣದಲ್ಲಿ ಮಾಡಲಾಗಿದೆ. ಶಿಕ್ಷಣದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ, ನುರಿತ ಶಿಕ್ಷಕರಿಂದ ವಿಶೇಷ ತರಬೇತಿ, ಕ್ರೀಡೆಯಲ್ಲಿ ಪರಿಣಿತ ಹೊಂದುವಂತೆ ಮಾಡಲಾಗುವದು ಎಂದು ಹೇಳಿದರು.
ಹಲಕುರ್ಕಿಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ: 20 ಸಾವಿರಕ್ಕೂ ಅಧಿಕ ಉದ್ಯೋಗ ಸಿಗುವ ಹಲಕುರ್ಕಿ ಗ್ರಾಮದಲ್ಲಿ ವಿಮಾನ ನಿಲ್ದಾಣ ಹಾಗೂ ಇತರ ಕೈಗಾರಿಕಾ ಅಭಿವೃದ್ಧಿ ಮಾಡಲಾಗುತ್ತಿದೆ. ರೈಲು ಹಳಿ ಹಾಗೂ ಭಾರತ ಮಾಲಾ ರಾಷ್ಟ್ರೀಯ ಹೆದ್ದಾರಿ ಆಗುತ್ತಿದೆ.
ಹಲಕುರ್ಕಿ ಗ್ರಾಮದಲ್ಲಿ ರೈಲು ಹಳಿ, ರಾಷ್ಟ್ರೀಯ ಹೆದ್ದಾರಿ ಹಾಗೂ ವಿಮಾನ ನಿಲ್ದಾಣ ಆಗುವ ಮೂಲಕ ರಪ್ತು ಮಾಡಲಿಕ್ಕೆ ಅನುಕೂಲವಾಗಲಿದೆ. ಚಿಕ್ಕಸಂಗಮ ದಲ್ಲಿ ಬೋಟಿಂಗ್ ವ್ಯವಸ್ಥೆ, ರಂಗಿನತಿಟ್ಟು ಮಾದರಿಯಲ್ಲಿ ಚಿಕ್ಕಸಂಗಮದಲ್ಲಿ ಪಕ್ಷಿ ಧಾಮ ಮಾಡಲಾಗುತ್ತದೆ ಎಂದರು.
ಇದನ್ನೂಓದಿ:2ಬಿ ಮೀಸಲಾತಿ ರದ್ದು: ರಾಜ್ಯಪಾಲರಿಗೆ ದೂರು ನೀಡಲು ಎಎಪಿ ನಿರ್ಧಾರ