ಬಾಗಲಕೋಟೆ : ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಜನ್ಮ ದಿನದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಸದ್ಭಾವನಾ ದಿನಾಚರಣೆ ನಡೆಯಿತು.
ಈ ವೇಳೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಪ್ರತಿಜ್ಞಾ ವಿಧಿ ಬೋಧಿಸಿದರು. ಜಾತಿ, ಪ್ರದೇಶ, ಮತ ಅಥವಾ ಭಾಷೆಯ ಬೇಧ ಭಾವವಿಲ್ಲದೆ ಭಾರತದ ಎಲ್ಲಾ ಜನತೆಯ ಭಾವೈಕ್ಯತೆ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ. ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ನಮ್ಮಲ್ಲಿರುವ ಎಲ್ಲಾ ಬೇಧ ಭಾವ, ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಸಮಸ್ಯೆ ಪರಿಹರಿಸುತ್ತೇವೆ ಎಂದು ಪ್ರತಿಜ್ಞೆಗೈಯ್ಯಲಾಯಿತು.
ದೇವರಾಜ್ ಅರಸು 105ನೇ ಜನ್ಮ ದಿನ ಆಚರಣೆ:
ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಾಮಾಜಿಕ ಪರಿವರ್ತನೆಯ ಹರಿಹಾರ, ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು 105ನೇ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ದೇವರಾಜ್ ಅರಸು ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ.ಉಪ ಕಾರ್ಯದರ್ಶಿ ಅಮರೇಶ ನಾಯಕ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ ಡೊಂಬರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.