ಬಾಗಲಕೋಟೆ: ವಿದ್ಯೆ ಕಲಿತು ಏನಾದರೂ ಸಾಧನೆ ಮಾಡಲೇಬೇಕು ಎಂಬ ಛಲ ಇದ್ದರೆ, ಎಷ್ಟೇ ಬಡತನ ಇದ್ದರೂ ಅಡ್ಡಿಯಾಗದು ಎಂದು ವಿದ್ಯಾರ್ಥಿನಿ ಸಾಧಿಸಿ ತೋರಿಸಿದ್ದಾಳೆ. ಜಿಲ್ಲೆಯ ಬನಹಟ್ಟಿ ಪಟ್ಟಣದ ಪೂಜಾ ಎಂಬ ವಿದ್ಯಾರ್ಥಿನಿ ಹೂವು ಮಾರಾಟದಲ್ಲಿ ತೊಡಗಿಕೊಂಡು ಈ ಸಾಧನೆ ಮಾಡಿದ್ದಾರೆ.
ಎಸ್‌ಆರ್‌ಎ ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿನಿಯಾಗಿರುವ ಪೂಜಾ ಉದಯ ಕೊಣ್ಣೂರ ದ್ವಿತೀಯ ಪಿಯು ಪರೀಕ್ಷೆಯಲ್ಲಿ 600 ಕ್ಕೆ 586 ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕನ್ನಡ-98, ಇಂಗ್ಲಿಷ್-95, ಗಣಿತ-100, ಜೀವಶಾಸ್ತ್ರ-98, ಭೌತಶಾಸ್ತ್ರ-96, ರಸಾಯನ ಶಾಸ್ತ್ರ-93 ಒಟ್ಟು 97.67 ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಈ ಸಾಧನೆಗೆ ಉಪನ್ಯಾಸಕರಾದ ಕೆ.ಎಚ್.ಸಿನ್ನೂರ, ನಾಗರಾಜ, ಎಸ್.ಬಿ.ಚಾಂಗ್ಲೇರಿ, ಮಂಜು ಆಲಗೂರ, ಮೀನಾಕ್ಷಿ, ಶಿಲ್ಪಾ ಅಗಡಿಯವರ ಪ್ರೋತ್ಸಾಹ ಕಾರಣ ಎಂದು ಅವರು ಸ್ಮರಿಸಿದರು.
ಮೂರು ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡಿರುವ ಪೂಜಾ ತಾಯಿಯ ಆರೈಕೆಯಲ್ಲಿ ಬೆಳೆದಿದ್ದಾರೆ. ತಾಯಿ ದಿನನಿತ್ಯ ಹೊಲದಲ್ಲಿ ಕಳೆ ತೆಗೆಯುವ ಕಾಯಕ ಮಾಡಿಕೊಂಡು ತನ್ನ ಮೂರು ಮಕ್ಕಳ ಶಿಕ್ಷಣ ಹಾಗು ಕುಟುಂಬದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ತಾಯಿಗೆ ಸಹಾಯ ಮಾಡುವ ಉದ್ದೇಶದಿಂದ ಬಿಡುವಿನ ಸಮಯದಲ್ಲಿ ಹೂ ಪೋಣಿಸುವ ಕಾಯಕವನ್ನು ಪೂಜಾ ಮಾಡುತ್ತಿದ್ದು, ಸದ್ಯ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿರುವ ಪೂಜಾರಿಗೆ ಮುಂದೆ ಎಂಜಿನಿಯರಿಂಗ್ ಓದುವ ಆಸೆ ಇದೆ.
"ನನ್ನ ಕುಟುಂಬದ ಕಷ್ಟ ನೋಡಲಾಗುತ್ತಿಲ್ಲ. ತುಂಬಾ ಕಷ್ಟಪಟ್ಟು ನನ್ನ ತಾಯಿ ನಮ್ಮನ್ನು ಸಾಕುತ್ತಿದ್ದಾರೆ. ಉತ್ತಮವಾಗಿ ಕಲಿತು ನನ್ನ ಕುಟುಂಬವನ್ನು ಸಂಕಷ್ಟದಿಂದ ಪಾರು ಮಾಡಬೇಕು" ಅನ್ನೋದು ಪೂಜಾ ಮಾತು.
ಈ ಪ್ರತಿಭಾವಂತ ವಿದ್ಯಾರ್ಥಿನಿಗೆ ಆರ್ಥಿಕ ಸಹಾಯ ಮಾಡಲಿಚ್ಛಿಸುವವರು 87922-55688 ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದು.
ಇದನ್ನೂ ಓದಿ :ಶಾಸಕ ಹರೀಶ್ ಪೂಂಜಾರಿಗೆ ಕೊರಿಯರ್ನಲ್ಲಿ ಬಂದ್ವು ಟೋಪಿ, ಹಸಿರು ಶಾಲು.. ಕಾರಣ?