ಬಾಗಲಕೋಟೆ : ಇಡೀ ದೇಶಾದ್ಯಂತ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ, ಏಕರೂಪ ಆನ್ಲೈನ್ ಯೋಜನೆ ಜಾರಿಗೆ ತರಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆನ್ಲೈನ್ ವ್ಯವಸ್ಥೆ ಮಾಡಿದ್ದರಿಂದ ಕೆಲವರಿಗೆ ಅನುಕೂಲವಾಗಿದ್ದರೆ, ಇನ್ನು ಕೆಲವರಿಗೆ ತೊಂದರೆ ಉಂಟಾಗಿದೆ.
ಎಲ್ಎಲ್ಆರ್, ಡಿಎಲ್, ಪಾಸಿಂಗ್ ಹಾಗೂ ವಾಹನದ ತೆರಿಗೆ ತುಂಬುವುದು ಸೇರಿ ಪ್ರತಿಯೊಂದನ್ನು ಆನ್ಲೈನ್ ಮೂಲಕ ಅರ್ಜಿ ತುಂಬಿ ಮುಂದಿನ ಕೆಲಸಗಳನ್ನು ಮಾಡಬೇಕಾಗುತ್ತದೆ. ಎಲ್ಎಲ್ಆರ್ ಅರ್ಜಿ ತುಂಬಿ ಸರ್ಕಾರಕ್ಕೆ 200 ರೂ. ಶುಲ್ಕ ತುಂಬಬೇಕು. ಆನ್ಲೈನ್ ಬರುವ ಮುಂಚೆ ಎಲ್ಎಲ್ಆರ್ಗೆ ಕೇವಲ 30 ರೂ. ಇತ್ತು. ಈಗ 200 ರೂಪಾಯಿಗಳ ದರ ನಿಗದಿ ಮಾಡಿದ್ದಾರೆ. ಅದೇ ರೀತಿ ಡಿಎಲ್ಗೆ ₹ 750 ರಿಂದ 800 ನಿಗದಿ ಮಾಡಿದ್ದಾರೆ. ಈ ಹಿಂದೆ ಕೇವಲ 200 ರೂ. ತುಂಬಿದರೆ ಡಿಎಲ್ ನೀಡುತ್ತಿದ್ದರು.
ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ಸಾರಿಗೆ ಕಚೇರಿ ಇದ್ದು, ಒಂದು ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ, ಇನ್ನೊಂದು ಉಪ ವಿಭಾಗ ಎಂದು ಜಮಖಂಡಿ ಪಟ್ಟಣದಲ್ಲಿ ತೆರಯಲಾಗಿದೆ. ಕೊರೊನಾ ಬಳಿಕ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಎಂಬ ಉದ್ದೇಶದಿಂದ, ಜಮಖಂಡಿ ಪಟ್ಟಣಕ್ಕೆ ಕೇವಲ 70 ಜನರಿಗೆ ಮಾತ್ರ ಪ್ರತಿ ನಿತ್ಯ ಡಿಎಲ್ ಅಥವಾ ಎಲ್ಎಲ್ಆರ್ ಹಾಗೂ ಇತರ ಯೋಜನೆಯ ಅರ್ಜಿ ಸಲ್ಲಿಸುವುದಕ್ಕೆ ಸರ್ಕಾರ ಮಿತಿ ಮಾಡಿದೆ.
ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ನೂರಕ್ಕೆ ಸೀಮಿತಗೊಳಿಸಿದ್ದು, ಇದು ಜನತೆಗೆ ಭಾರವಾಗುತ್ತದೆ. ಯಾಕೆಂದರೆ, ಆನ್ಲೈನ್ ಅರ್ಜಿ ಭರ್ತಿ ಮಾಡುವಾಗ ನೂರರ ಗಡಿ ದಾಟಿತು ಅಂದ್ರೆ ಗ್ರಾಮೀಣ ಪ್ರದೇಶದಿಂದ ಬಂದ ಜನತೆ ಮರಳಿ ಹೋಗಬೇಕಾಗುತ್ತದೆ. ಜೊತೆಗೆ ನೆಟ್ವರ್ಕ್ ಸಮಸ್ಯೆ, ವಿದ್ಯುತ್ ಸಮಸ್ಯೆ ಉಂಟಾದಲ್ಲಿ ಯಾವುದೇ ಕೆಲಸ ಇಲ್ಲದೆ ವಾಪಸ್ಸು ಹೋಗಬೇಕು. ಸಮಯ ಹಾಗೂ ಹಣ ವ್ಯರ್ಥ ಆಗುತ್ತದೆ ಎಂದು ಜನತೆ ಕೇಂದ್ರ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುವಂತಾಗುತ್ತದೆ.
ಸುವ್ಯವಸ್ಥಿತವಾಗಿ ಹಣ ಹಾಗೂ ಸಮಯ ಪೋಲಾಗದಂತೆ ಸಾರಿಗೆ ಇಲಾಖೆಯಲ್ಲಿ ಆನ್ಲೈನ್ ವ್ಯವಸ್ಥೆ ಜಾರಿಗೆ ತಂದಿರುವುದು ಸರಿಯಾದ ಕ್ರಮ. ಆದರೆ, ಭಾರತ ದೇಶದಲ್ಲಿ ಗ್ರಾಮೀಣ ಪ್ರದೇಶಗಳು ಹೆಚ್ಚಾಗಿ ಇರುವುದರಿಂದ ಏಜೆಂಟ್ ಹತ್ತಿರ ಹೋಗಲೇಬೇಕಾದ ಅನಿವಾರ್ಯ ಸ್ಥಿತಿಯಿದೆ. ಇದಕ್ಕೆ ಕಡಿವಾಣ ಹಾಕುವಂತೆ ಮತ್ತಷ್ಟು ಬದಲಾವಣೆ ತಂದು ಜನತೆಗೆ ಅನುಕೂಲ ಮಾಡಿ ಕೂಡುವ ಅಗತ್ಯವಿದೆ.