ಬಾಗಲಕೋಟೆ: ಭಾನಾಮತಿ ಕಾಟ ಎನ್ನಲಾಗಿದ್ದ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಹೊಸ ಟಿಸ್ಟ್ ಸಿಕ್ಕದೆ. ಶಾಲಾ ಬಾಲಕಿಯೇ ಈ ತರಹದ ಸುಳ್ಳು ಸೃಷ್ಟಿ ಮಾಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ ತಿಳಿಸಿದ್ದಾರೆ.
ಬಾಗಲಕೋಟೆ ನಗರದ ಪ್ರೆಸ್ ಕಬ್ಲ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಈ ಮಾಹಿತಿಯನ್ನ ನೀಡಿದ್ದಾರೆ. ಗುಳೇದಗುಡ್ಡ ತಾಲೂಕಿನ ಇಂಜನವಾರಿ ಶಾಲೆಯಲ್ಲಿ ಅದೃಶ್ಯವಾಗಿ ಕಲ್ಲು ಬೀಳುತ್ತಿದ್ದ ಕಾರಣ ಅಲ್ಲಿ ಭಾನಾಮತಿ ಕಾಟ ಇದೆ ಎಂದು ಊಹಿಸಲಾಗಿತ್ತು. ಆದರೆ, ಸಿಸಿಟಿವಿ ಅಳವಡಿಸಿದ ನಂತರ ಬಾಲಕಿಯೇ ಶಾಲೆಯಲ್ಲಿ ಕಲ್ಲು ತಂದು ಇಡುವ ದೃಶ್ಯ ಕಂಡು ಬಂದಿದೆ. ಇನ್ನು ಆಕೆ ಚಿಕ್ಕ ಬಾಲಕಿಯಾಗಿರುವುದರಿಂದ ಅವಳ ಜೊತೆ ನಯವಾಗಿ ವರ್ತಿಸಿ ಸುಳ್ಳು ಹೇಳಲು ಏನು ಕಾರಣ ಎಂಬುದನ್ನ ತಿಳಿದುಕೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಮೋಟರ್ ಕಾಯ್ದೆ ತಿದ್ದುಪಡಿಯಾದ ಮೇಲೆಯೂ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ ಹಿನ್ನೆಲೆ 24,000ಕ್ಕೂ ಹೆಚ್ಚು ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, 40 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ ಎಂಬ ಮಾಹಿತಿ ನೀಡಿದರು.
ಭದ್ರತಾ ದೃಷ್ಟಿಯಿಂದ ಮಹಿಳಾ ವಸತಿ ನಿಲಯ, ಶಾಲಾ ಕಾಲೇಜ್‌ಗಳಲ್ಲಿ ಸಿಸಿ ಟಿವಿ ಅಳವಡಿಸಲು ಸೂಚನೆ ನೀಡಲಾಗಿದೆ. ಎಲ್ಲಾ ವಸತಿ ನಿಲಯಗಳಲ್ಲಿ ಪಿಎಸ್ಐರಿಂದ ಎಸ್ಪಿವರೆಗೆ ಫೋನ್ ನಂಬರ್ ಇರುವ ನಾಮಫಲಕ ಅಳವಡಿಸಲಾಗಿದೆ. ಯಾರೇ ಆಗಲಿ ಲೈಂಗಿಕ ಕಿರುಕಳ ಸೇರಿದಂತೆ ಇತರ ದೌರ್ಜನ್ಯ ಎಸೆಗಿದಲ್ಲಿ ಕರೆ ಮಾಡಿ ದೂರು ನೀಡಬಹುದು. ಅಂತವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಲೋಕೇಶ್ ಜಗಲಸಾರ ತಿಳಿಸಿದರು. ಇದೇ ವೇಳೆ ಸಂವಾದಕ್ಕೆ ಆಗಮಿಸಿದ್ದ ಪತ್ರಕರ್ತರ ಸಂಘಟನೆ ಅಧ್ಯಕ್ಷರಾದ ಮಹೇಶ ಅಂಗಡಿ ಎಸ್ಪಿ ಅವರನ್ನ ಸನ್ಮಾನಿಸಿದರು.