ಬಾಗಲಕೋಟೆ: ಕಳೆದ ಒಂದು ವಾರದಿಂದಲೂ ಮಳೆ ಆಗುತ್ತಿರುವ ಪರಿಣಾಮ ಬಾದಾಮಿಯ ಬನಶಂಕರಿ ದೇವಾಲಯ ಮುಂದೆ ಇರುವ ಪುಷ್ಕರಣಿಯಲ್ಲಿ ನೀರು ತುಂಬಿದೆ.
ಈ ಹಿಂದೆ ಸಮಿಶ್ರ ಸರ್ಕಾರದ ಅವಧಿಯಲ್ಲಿ ಲಕ್ಷಾಂತರ ರೂಪಾಯಿಗಳ ವೆಚ್ಚ ಮಾಡಿ, ಕೆನಾಲ್ ಮೂಲಕ ಹೊಂಡಕ್ಕೆ ನೀರು ತುಂಬಿಸುವ ಕಾರ್ಯ ಮಾಡಿದ್ದರು. ಆದರೂ ಅದು ಯಶಸ್ವಿಯಾಗದೆ ಒಂದು ಹನಿ ನೀರು ಇಲ್ಲದೆ ಪುಷ್ಕರಣಿ ಬತ್ತಿ ಹೋಗಿತ್ತು. ಆದರೆ, ಈ ಬಾರಿ ಪ್ರವಾಹ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಬನಶಂಕರಿ ದೇವಾಲಯದ ಪುಷ್ಕರಣಿಯಲ್ಲಿ ನೀರು ತುಂಬಿದೆ. ಕಳೆದ ಆರು ವರ್ಷಗಳಿಂದಲೂ ಹೊಂಡದಲ್ಲಿ ನೀರು ಇಲ್ಲದೆ ಬತ್ತಿ ಹೋಗಿತ್ತು. ಈಗ ಸಾಕಷ್ಟು ಮಳೆ ಆದ ಪರಿಣಾಮ ಹೊಂಡದಲ್ಲಿ ನೀರು ತುಂಬಿದ್ದು, ಸ್ಥಳೀಯರಿಗೆ ಹಾಗೂ ಭಕ್ತರಿಗೆ ಸಂತಸ ಮೂಡಿಸಿದೆ.
ಆದರೆ, ಮಳೆ ನೀರು ಸಂಗ್ರಹ ಆದ ಹಿನ್ನೆಲೆ ಹೊಂಡದಲ್ಲಿ ಕೇಸರುಮಯವಾಗಿತ್ತು. ಅಲ್ಲದೇ ವ್ಯರ್ಥವಾಗಿ ಎಸೆದ ಸಾಮಗ್ರಿಗಳಿಂದ ಕೊಳಚೆ ಆಗಿತ್ತು. ಈ ಹಿನ್ನೆಲೆಯಲ್ಲಿ
NDRF ತಂಡದವರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಳಾಸರ್ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದರು.
ಬಾಗಲಕೋಟೆ ಡಿವೈಎಸ್ಪಿ ಗಿರೀಶ್, ಡಿವೈಎಸ್ಪಿ ರವೀಂದ್ರ ಶಿರೂರ ಹಾಗೂ ಬಾದಾಮಿ ಪೊಲೀಸ್ ಠಾಣಾ ಸಿಬ್ಬಂದಿ ದೀಪಾವಳಿ ಹಬ್ಬದ ದಿನದಂದು ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಗಮನ ಸೆಳೆದರು. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ದೀಪಾವಳಿ ಹಬ್ಬ ಹೀಗೆ ಐತಿಹಾಸಿಕ ಹೊಂಡ ಸ್ವಚ್ಛತೆ ಮಾಡುವ ಮೂಲಕ ಆಚರಣೆ ಮಾಡಿದರು. ಪೊಲೀಸರು ಕೇವಲ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಮಾಡುವುದು ಅಲ್ಲದೇ ಇಂತಹ ಕಾರ್ಯವನ್ನು ಮಾಡುತ್ತಾರೆ ಎಂದು ತೋರಿಸಿ ಕೊಟ್ಟಿರುವುದು ಎಸ್ ಪಿ ಲೋಕೇಶ್ ಅವರು ಸಮಾಜಮುಖಿ ಅಧಿಕಾರಿ ಎಂದು ಶ್ಲಾಘನೆ ವ್ಯಕ್ತವಾಗಿದೆ.