ಬಾಗಲಕೋಟೆ: ದೇಶಾದ್ಯಂತ ಹೆಸರು ಮಾಡಿರುವ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಸುಪ್ರಸಿದ್ಧ ಮುಧೋಳ ಶ್ವಾನ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆ (ಎಸ್ಪಿಜಿ)ಯ ತಂಡಕ್ಕೆ ಸೇರ್ಪಡೆಯಾಗಿದೆ. ತನ್ನ ವಿಶೇಷ ಕಾರ್ಯ ಶಕ್ತಿ, ಗುಣಗಳದಿಂದಲೇ ಈ ಶ್ವಾನಗಳು ದೇಶಾದ್ಯಂತ ಹೆಸರು ಮಾಡಿವೆ.
ದೇಶದ ಪ್ರಧಾನಿ ಮನಸೆಳೆದ ಮುಧೋಳ ಶ್ವಾನ ಬಗ್ಗೆ ಜಿಲ್ಲೆಯ ಜನತೆ ಇನ್ನಷ್ಟು ಅಭಿಮಾನಪಡುವಂತಾಗಿದೆ. ಮುಧೋಳ ಹೌಂಡ್ ಎಂದು ಕರೆಯುವ ಈ ಶ್ವಾನ ಆಯ್ಕೆಯಾಗಿದ್ದೇ ತಡ ದೆಹಲಿಯಿಂದ ಬಂದ ಎಸ್ಪಿಜಿ ತಂಡದ ಸದಸ್ಯರು, ಈ ತಳಿಯ ಎರಡು ನಾಯಿ ಮರಿಗಳನ್ನು ಕೊಂಡೊಯ್ದು ದೆಹಲಿಯಲ್ಲಿ ತರಬೇತಿ ನೀಡಲು ಮುಂದಾಗಿದ್ದಾರೆ. ಮುಧೋಳ ನಾಯಿಯ ಗುಣ ಮತ್ತು ಅದರ ಕಾರ್ಯವೈಖರಿಯನ್ನು ಅರಿತಿರುವ ಎಸ್ಪಿಜಿ ತಂಡದ ವೈದ್ಯ ಡಾ.ಬಿ.ಎನ್.ಪಂಚಬುದ್ದೆ ಮತ್ತು ತರಬೇತಿದಾರರ ತಂಡ ದೆಹಲಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಮತ್ತು ಎಸ್ಪಿ ಕಚೇರಿ ಸಂಪರ್ಕಿಸಿ ಬಳಿಕ ಜಿಲ್ಲೆಯ ಮುಧೋಳಕ್ಕೆ ಆಗಮಿಸಿದ್ದರು.
ಏಪ್ರಿಲ್ 25ರಂದು ಮುಧೋಳದ ತಿಮ್ಮಾಪೂರ ಬಳಿ ಇರುವ ಮುಧೋಳ ಶ್ವಾನ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ಮುಧೋಳ ನಾಯಿ ಮರಿಗಳ ಪರಿಶೀಲನೆ ನಡೆಸಿ, ಬಳಿಕ ಎರಡು ಗಂಡು ಜಾತಿಯ ಮುಧೋಳ ನಾಯಿಗಳನ್ನು ಪಡೆದುಕೊಂಡು ತೆರಳಿದ್ದಾರೆ. ದೆಹಲಿಯಲ್ಲಿ ಇದೀಗ ಮುಧೋಳ ನಾಯಿ ಮರಿಗಳಿಗೆ ಎಸ್ಪಿಜಿ ಭದ್ರತಾ ಪಡೆಯಿಂದ ತರಬೇತಿ ಸಹ ನಡೆಯುತ್ತಿದೆ. ನಮ್ಮ ಜಿಲ್ಲೆಯ ಮುಧೋಳ ಶ್ವಾನಗಳು ಇದೀಗ ದೇಶದ ಪ್ರಧಾನಿ ಮೋದಿಯವರ ಮನಸೆಳೆದು ಇಂದು ಎಸ್ಪಿಜಿ ತಂಡಕ್ಕೆ ಸೇರ್ಪಡೆಯಾಗಿರೋದು ನಮಗೆ ಹೆಮ್ಮೆ ತಂದಿದೆ ಅಂತಾರೆ ಜಿಲ್ಲೆಯ ಮುಧೋಳ ತಳಿ ನಾಯಿ ಸಾಕಾಣಿಕೆದಾರರು.
ಮನ್ ಕಿ ಬಾತ್ನಲ್ಲಿ ಮುಧೋಳ ನಾಯಿಗಳ ಉಲ್ಲೇಖಿಸಿದ್ದ ಪ್ರಧಾನಿ: ಈ ಹಿಂದೆ ದೇಶದ ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ನಲ್ಲಿ ಮುಧೋಳ ನಾಯಿಗಳ ಮಹತ್ವವನ್ನು ಸಾರಿದ್ದರು. ಈ ಮೂಲಕ ಆತ್ಮನಿರ್ಭರ ಭಾರತದ ಭಾಗವಾಗಿ ಸ್ವಾವಲಂಬಿ ಭಾರತಕ್ಕಾಗಿ ಮನೆಯಲ್ಲಿ ಸಾಕುವುದಾದರೇ ಮುಧೋಳ ತಳಿಯಂತಹ ನಾಯಿಗಳನ್ನು ಸಾಕಿ, ದೇಶಿಯ ತಳಿಗಳ ಪಾಲನೆ, ಪೋಷನೆ ಮಾಡಿ ಎಂದು ಕರೆ ನೀಡಿದ್ದರು.
ಈ ಮಧ್ಯೆ ಮುಧೋಳ ನಾಯಿ ಮರಿಗಳು ತಮ್ಮ ವಿಶೇಷ ಕಾರ್ಯ ಶಕ್ತಿ, ಆಕಾರ, ಬಣ್ಣ, ಗುಣಗಳ ವ್ಯಕ್ತಿತ್ವದಿಂದಲೇ ದೇಶಾದ್ಯಂತ ಹೆಸರು ಮಾಡಿ ಭಾರತೀಯ ಸೇನೆ, ಸಿಆರ್ಪಿಎಪ್, ಮತ್ತು ವಾಯುಸೇನೆಯಲ್ಲೂ ಸೇರ್ಪಡೆಗೊಂಡು ಗಮನ ಸೆಳೆದಿದ್ದವು. ಆದರೆ, ಇದೀಗ ದೇಶದ ಪ್ರಧಾನಿಗಳ ಮನಗೆದ್ದ ಮುಧೋಳ ಶ್ವಾನಗಳು ಪ್ರಧಾನಿಗಳ ಎಸ್ಪಿಜಿ ತಂಡಕ್ಕೆ ಸೇರ್ಪಡೆಯಾಗಿರೋದಕ್ಕೆ ಇಡೀ ಜಿಲ್ಲೆಯ ಜನರು ಸಂತಸಪಡುವಂತಾಗಿದೆ.
ಇದನ್ನೂ ಓದಿ: ಮನುಷ್ಯನಂತೆ ಯೋಚಿಸುವ, ಹುಲಿ ಜತೆ ಸೆಣಸುವ ಸಾಮರ್ಥ್ಯದ ಧೈರ್ಯಶಾಲಿ ತರಕರಡಿ ಪತ್ತೆ