ಬಾಗಲಕೋಟೆ: ಬಾಗಲಕೋಟೆಗೆ ಮಂಜೂರಾಗಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ನನ್ನ ವಿರೋಧವಿಲ್ಲ. ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುದಾನ ನೀಡುವಂತೆ ಮುಖ್ಯಮಂತ್ರಿಯನ್ನು ಈಗಾಗಲೇ ಭೇಟಿಯಾಗಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ಅನುದಾನ ಬರುವುದು ವಿಳಂಬ ವಾಗುತ್ತಿದೆ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಸ್ಪಷ್ಟಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜು ಕಾರ್ಯಾರಂಭಕ್ಕೆ ಹಾಗೂ ಅನುದಾನ ನೀಡುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಲಾಗಿದೆ. ನನ್ನ ಅವಧಿಯಲ್ಲೇ ಸರ್ಕಾರಿ ಡಿಗ್ರಿ ಕಾಲೇಜು, 20ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಬಂದಿವೆ. ನಾನೇಕೆ ಮೆಡಿಕಲ್ ಕಾಲೇಜ್ ಕಾರ್ಯಾರಂಭಕ್ಕೆ ವಿರೋಧ ಮಾಡಲಿ ಎಂದು ಪ್ರಶ್ನಿಸಿದರು.
ಸರ್ಕಾರದ ಸಂಸ್ಥೆ ಬರಲು ನನ್ನದೂ ಎಂದೂ ವಿರೋಧವಿಲ್ಲ. ಇದರ ಬಗ್ಗೆ ಹೋರಾಟದ ಅವಶ್ಯಕತೆ ಇಲ್ಲ. ಆರ್ಥಿಕ ಸ್ಥಿತಿ ಸುಧಾರಣೆಯಾದ ಬಳಿಕ ಮುಖ್ಯಮಂತ್ರಿ ಅನುದಾನ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನನ್ನ ಏಳಿಗೆ ಸಹಿಸದವರು ವಿನಾ ಕಾರಣ ಮೆಡಿಕಲ್ ಕಾಲೇಜ್‍ಗೆ ವಿರೋಧ ಮಾಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಬಾಣಾಪೂರ ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ರಸ್ತೆ ಕಾಮಗಾರಿಗೆ ಈಗಾಗಲೇ 250 ಕೋಟಿ ರೂ. ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಟೆಂಡರ್ ಆದ ಬಳಿಕ ಕೆಲಸ ವೇಗವಾಗಿ ನಡೆಯಲಿದೆ. ಬಾಣಾಪೂರ ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ ಶಿರೂರು ಗೇಟ್ ಮೂಲಕ ಹಾದು ಹೋಗುವ ಚತುಷ್ಪತ ರಸ್ತೆ ಬಸವೇಶ್ವರ ಪಾಲಿಟೆಕ್ನಿಕ್ ಕಾಲೇಜ್, ಮೆಳ್ಳಿಗೇರಿ ಪೆಟ್ರೋಲ್ ಬಂಕ್ ಮೂಲಕ ಗದ್ದನಕೇರಿಯಿಂದ ಹೋಗಲಿದೆ ಎಂದರು.