ಬಾಗಲಕೋಟೆ: "ಅನಂತ್ ಕುಮಾರ್ ಹೆಗಡೆ ದೇಶದ್ರೋಹಿ ರೀತಿ ಮಾತನಾಡುತ್ತಾರೆ. ಹಿಂದೂ ಧರ್ಮದಲ್ಲಿ ಒಂದು ಧರ್ಮದ ಬಗ್ಗೆ ಅವಹೇಳನ ಮಾಡು ಅಂತ ಹೇಳಿದೆಯಾ" ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಕಿಡಿಕಾರಿದರು. ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಚುನಾವಣೆ ಹತ್ತಿರ ಬಂದ ತಕ್ಷಣ ಇವರಿಗೆಲ್ಲ ಹಿಂದೂತ್ವ ನೆನಪಾಗುತ್ತೆ. ಚುನಾವಣೆ ಮುಗಿದ ನಂತರ ಎಲ್ಲಾ ಬಂದ್ ಆಗುತ್ತದೆ, ಎಲ್ಲಾ ಎಲೆಕ್ಷನ್ ಗಿಮಿಕ್" ಎಂದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ನೀಡಿರುವ ಹೇಳಿಕೆ ವಿಚಾರವಾಗಿ ಮಾತನಾಡಿ, "ಕ್ಷಮೆ ಕೇಳಬೇಕು ಎಂದು ಎಚ್ಚರಿಕೆ ಕೊಡುತ್ತೇನೆ. ರಾಜ್ಯದ ಮುಖ್ಯಮಂತ್ರಿಗೆ ನಾನಾಗಲಿ, ಅವರಾಗಲಿ ಗೌರವ ಕೊಡಬೇಕು. ಅವರು ಯಾವುದೇ ಪಕ್ಷದಿಂದ ಗೆದ್ದಿರ ಬಹುದು ಆದರೆ ಅವರು ಈ ರಾಜ್ಯದ ಮುಖ್ಯಮಂತ್ರಿ. ಈ ರೀತಿಯ ಅವರ ಮಾತು ಶೋಭೆ ತರಲ್ಲ. ಇವರು ಅಂಬೇಡ್ಕರ್ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹಿಂದೂ ಧರ್ಮಕ್ಕೆ ಅವಹೇಳನ ಮಾಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೀನಿ ಅಂತಾರೆ, ಸಂವಿಧಾನವನ್ನು ಇವರಿಗೆ ಏನಾದರೂ ಬರೆದು ಕೊಟ್ಟಿದ್ದಾರಾ?" ಎಂದು ಪ್ರಶ್ನಿಸಿದರು.
"ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಸಿಗಲ್ಲ ಎಂಬ ಸೂಚನೆ ಸಿಕ್ಕಿದೆ. ಅದಕ್ಕೆ ಈ ರೀತಿ ಮಾತನಾಡಿದರೆ ನನಗೆ ಟಿಕೆಟ್ ಸಿಗುತ್ತೆ ಅನ್ನೋ ಆಸೆಯಿಂದ ಮಾತನಾಡುತ್ತಾರೆ. ಟಿಕೆಟ್ಗಾಗಿ, ಅಧಿಕಾರಕ್ಕಾಗಿ ದೇವರ ದುರ್ಬಳಕೆ, ಧರ್ಮದ ದುರ್ಬಳಕೆ ಮಾಡಿಕೊಳ್ಳುವುದನ್ನು ಮಾಡುತ್ತಿದ್ದಾರೆ. ಒಮ್ಮೆಯಾದರೂ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ?. ಯುವಕರು ಉದ್ಯೋಗ ಕೊಡಿ ಅಂತಿದಾರೆ ಇವರು ಕೊಡುತ್ತಿಲ್ಲ. ನಾವು ಯುವನಿಧಿ ಮೂಲಕ ಸಹಾಯ ಮಾಡುತ್ತಿದ್ದೇವೆ. ಆದರೆ ಬಿಜೆಪಿಗರು ರಾಮ, ಶ್ರೀರಾಮ, ಜೈರಾಮ್ ಎನ್ನುತ್ತಾರೆ. ಆದರೆ, ದೇವರು ನನ್ನ ಆಸ್ತಿಯೂ ಅಲ್ಲ, ಅವರ ಆಸ್ತಿಯೂ ಅಲ್ಲ ಎಲ್ಲರ ಆಸ್ತಿ" ಎಂದರು.
ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಿಮಗೆ ಆಹ್ವಾನ ಬಂದಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಆಹ್ವಾನ ಯಾಕ ಬೇಕು. ರಾಮನ ಗುಡಿಗೆ ಹೋಗಲು ಇವರ ಅನುಮತಿ ಬೇಕಾ?. ಇವರು ಆಹ್ವಾನಿಸಿದರೆ ಮಾತ್ರ ಹೋಗಬೇಕಾ?. ಕಾಂಗ್ರೆಸ್ ನವರಿಗೆ ರಾಮ, ರಹೀಮ ಎಲ್ಲರೂ ಬಂದೇ. ನಾವು ಎಲ್ಲಾ ದೇವರಿಗೂ ಗೌರವ ಕೊಡುತ್ತೇವೆ ಅದರಂತೆ ರಾಮನಿಗೂ ಗೌರವ ಕೊಡುತ್ತೇವೆ. ಕಾಂಗ್ರೆಸ್ನವರು ಹಿಂದೂಗಳ ವಿರೋಧಿಗಳು ಎಂದು ಹೇಳಿತ್ತಿರುವುದು ಬಿಜೆಪಿಯವರು. ನಾವ್ಯಾರೂ ರಾಮನ ವಿರೋಧಿಗಳು ಎಂದು ಹೇಳಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ