ಬಾಗಲಕೋಟೆ : ರಾಜ್ಯದಲ್ಲಿ ಮೂರು ಡಿಸಿಎಂ ಸ್ಥಾನ ವಿಚಾರವಾಗಿ ಸಚಿವ ಕೆ ಎನ್ ರಾಜಣ್ಣ ಮುಂಚೆಯಿಂದಲೇ ಹೇಳ್ತಿದ್ದಾರೆ. ಅದನ್ನು ಅಂತಿಮವಾಗಿ ಪಕ್ಷ ನಿರ್ಧಾರ ಮಾಡಬೇಕು. ಡಿಸಿಎಂ ಒಬ್ರು ಇರಬೇಕಾ, ಮೂವರು ಇರಬೇಕಾ, ನಾಲ್ಕು ಜನ ಇರಬೇಕಾ ಎಂದು ಪಕ್ಷ ನಿರ್ಧರಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ಅಂತಿಮವಾಗಿ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದ ಸಚಿವರು, ಸಮಾಜಕ್ಕೆ ನ್ಯಾಯ ಒದಗಿಸಿಕೊಡಲಿಕ್ಕೆ ಡಿಸಿಎಂ ಸ್ಥಾನ ಹೆಚ್ಚಿಸುವ ಕೆಲಸ ಅಷ್ಟೆ, ಅದು ಡಿಸಿಎಂ ಡಿಕೆಶಿ, ಸಿಎಂ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲಿಕ್ಕೆ ಡಿಸಿಎಂ ಸ್ಥಾನ ಸೃಷ್ಟಿಸುತ್ತಿಲ್ಲ. ನಮ್ಮ ಪಕ್ಷಕ್ಕೆ ಎಸ್ಸಿ, ಎಸ್ಟಿ ಕೆಳ ಹಂತದ ಜನ ಮತ ನೀಡಿದ್ದಾರೆ. ಆ ವರ್ಗಗಳಿಗೆ ನ್ಯಾಯ ಸಿಗಬೇಕು ಅನ್ನೋ ಆಶೆ ಬಹಳ ಜನರದ್ದು ಇದೆ. ಅದನ್ನ ಪಕ್ಷ ನಿರ್ಧಾರ ಮಾಡುತ್ತದೆ ಎಂದ ಸತೀಶ್ ಜಾರಕಿಹೊಳಿ, ನನಗೆ ಡಿಸಿಎಂ ಸ್ಥಾನ ನೀಡಿದ್ರೆ ನಾ ಬೇಡಾ ಅಂತೀನಾ?. ಈಗ ನಾ ಮಂತ್ರಿ ಆಗಿದ್ದಿನಿ. ಮುಂದೆ ಸಿಎಂ ಅವರಿಂದ ಒಂದು ಲೆಟರ್ ಹೋದರೆ, ಡಿಸಿಎಂ ಆಗಬಹುದು ಎಂದು ತಾವು ಡಿಸಿಎಂ ಆಗುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ಆಪರೇಷನ್ ಕಮಲದ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಯತ್ನಾಳ್ ಹೇಳುತ್ತಾರೆ, ಜನವರಿಯಲ್ಲಿ ನಾವೇ ಸಿಎಂ ಆಗ್ತಿವಿ ಅಂತಾ. ಇನ್ನು ಜನವರಿ ಬಹಳ ದೂರವಿದೆ. ಈಗ ಅದರ ಬಗ್ಗೆ ಆತಂಕ ಪಡಬೇಕಿಲ್ಲ. ಜನವರಿ ಬಂದಾಗ ನೋಡೋಣ. ಈಗ ಜೆಡಿಎಸ್ ಬಿಜೆಪಿಯವರು ಓಪನ್ ಆಗಿ ಭೇಟಿ ಆಗ್ತಿದ್ದಾರೆ. ಮೊದ್ಲು ಕದ್ದು ಮುಚ್ಚಿ ಸೇರುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣೆಯಲ್ಲಿ ಅವರಿಬ್ಬರು ಒಂದಾಗಿ ಹೋಗಲು ತೀರ್ಮಾನಿಸಿದ್ದಾರೆ. ಈಗ ಅವರೆಲ್ಲ ಎಲ್ಲ ಕಡೆ ಸೇರುತ್ತಿದ್ದಾರೆ ಎಂದು ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರವಾಗಿ ಟಾಂಗ್ ನೀಡಿದರು. ಇದೇ ಸಮಯದಲ್ಲಿ ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿ, ಮಹಿಳೆಯರಿಗೆ ಮೊದಲು ಮೀಸಲಾತಿ ಹೆಚ್ಚಳ ಮಾಡಿದ್ದೇ ಕಾಂಗ್ರೆಸ್. ಮನಮೋಹನ್ ಸಿಂಗ್ ಪಿಎಂ ಇದ್ದಾಗ ಮಾಡಿದ್ದು, ಇದನ್ನು ಪಾರ್ಟಿ ಸ್ವಾಗತಿಸಿದೆ. ಬಿಜೆಪಿಗರು ಆ ತಂತ್ರ ಪ್ರಯೋಗಿಸಿದ್ದಾರೆ. ನಾವು ಅದನ್ನ ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು. ಬಿಜೆಪಿಯವರು ತಮಗೆ ಲಾಭ ಆಗುವ ನಿಟ್ಟಿನಲ್ಲಿ ಮಹಿಳಾ ಮೀಸಲಾತಿ ಮಾಡಿದ್ದಾರೆ. ನಾವು ಮಹಿಳಾ ಮೀಸಲಾತಿಯನ್ನು ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.
ಅಭಿನವ ಹಾಲಶ್ರೀ ಮುಗಳಖೋಡ ನಂಟಿನ ವಿಚಾರವಾಗಿ ಮಾತನಾಡಿದ ಸಚಿವರು, ಇಂತಹ ವಿಚಾರವನ್ನು ಪೊಲೀಸ್ ತನಿಖೆ ಮಾಡುತ್ತದೆ. ನಮಗೆ ಗೊತ್ತಿಲ್ಲದೆ ಹೇಳೋದು ಸರಿಯಲ್ಲ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ, ಮಾಡಲಿ. ಅಂತಿಮವಾಗಿ ಏನು ವರದಿ ಕೊಡುತ್ತಾರೆ ಕೊಡಲಿ. ಆ ಭಾಗದಲ್ಲಿ ನಡೆದ ಘಟನೆ ಯಾರ ಜೊತೆ ಲಿಂಕ್ ದಲ್ಲಿದಾರೋ, ಯಾರ ಕಡೆ ದುಡ್ಡು ತೆಗೆದುಕೊಂಡಿದ್ದಾರೆ, ಯಾರಿಗೆ ಮೋಸ ಮಾಡಿದ್ದಾರೆ ಎಂಬುದು ತಿಳಿಯಬೇಕಾದರೆ ಕಾಯಬೇಕು. ಇದರಲ್ಲಿ ಯಾರಿದ್ದರು, ಮರ್ಜಿಕಾಯುವ ಅವಶ್ಯಕತೆ ಇಲ್ಲ. ಯಾರೇ ಇದ್ರೂ ಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಪ್ಲಸ್ ಆಗಲಿವೆಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕನಿಷ್ಠ 20 ಸ್ಥಾನಗಳನ್ನಾದರೂ ನಾವು ಗೆಲ್ಲಲೇಬೇಕು. ಅಷ್ಟು ಗೆದ್ದರೆ ಮಾತ್ರ ನಮ್ಮ ಯೋಜನೆಗಳು, ಶಕ್ತಿ, ಸಾಮರ್ಥ್ಯಗಳು ಲಾಭ ಆದ ಹಾಗೆ. ಇಲ್ಲಾಂದ್ರೆ ಕಷ್ಟ ಎಂದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನಿಮ್ಮ ಪಕ್ಷಕ್ಕೆ ಯಾರಾದರೂ ಬರಬಹುದೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಜಿಲ್ಲಾಧ್ಯಕ್ಷರಿಗೆ ಕಾಂಟ್ಯಾಕ್ಟ್ ಮಾಡಬೇಕು. ನಾವು ಸ್ಪರ್ಧೆ ಮಾಡುತ್ತೇವೆ ಅಂತ ಅರ್ಜಿ ಕೊಡಬೇಕು. ನಾಯಕರು, ಅಧ್ಯಕ್ಷರು ಇದನ್ನು ತೀರ್ಮಾನ ಮಾಡುತ್ತಾರೆ. ತೀರ್ಮಾನದ ಪ್ರಕಾರ, ನಾವು ಸೀಟು ಘೋಷಣೆ ಮಾಡುತ್ತೇವೆ. ಬೆಂಗಳೂರು ಕಾರ್ಪೋರೇಟರ್ಗಳು ಬಹಳ ಜನ ಸೇರುತ್ತಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಯಾರಾದರೂ ಬಂದರೆ ಮುಕ್ತವಾದ ಅವಕಾಶ ಇದೆ. ನಮ್ಮ ಪಕ್ಷ, ಸಿದ್ಧಾಂತ ಒಪ್ಪಿದ್ರೆ ಸೇರಿಸಿಕೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಡಿಸಿಎಂ ಹುದ್ದೆ ಅವಶ್ಯಕತೆ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ: ಸತೀಶ್ ಜಾರಕಿಹೊಳಿ