ಬಾಗಲಕೋಟೆ : ಕೇಂದ್ರ ಸರ್ಕಾರ ಬಡವರ ಅಕ್ಕಿ ವಿತರಣೆಯಲ್ಲಿ ರಾಜಕಾರಣ ಮಾಡಬಾರದು. ಬಡವರು ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೇಂದ್ರದ ಬಳಿ ಇದೆ. ನಮಗೆ ಬೇಕಾಗಿರುವುದು ಕೇವಲ 2ಲಕ್ಷ ಮೆಟ್ರಿಕ್ ಟನ್. ನಾವೇನು ಪುಕ್ಕಟೆ ಕೇಳುತ್ತಿಲ್ಲ. ದುಡ್ಡು ಕೊಡ್ತೀವಿ ಅಂದಿದ್ದೀವಿ. ಬಡವರಿಗೆ ಅನುಕೂಲ ಆಗುವ ಯೋಜನೆಗೆ ದುರುದ್ದೇಶದಿಂದ ತಡೆ ಹಿಡಿಯೋದು ತರವಲ್ಲ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ರಾಜಕಾರಣವನ್ನು ಬಡವರು ಸಹಿಸಲ್ಲ. ಬೇಕಾದರೆ ಜನತೆಗೆ ಒಳ್ಳೆಯದನ್ನು ಮಾಡಲಿ, ಇನ್ನು 5 ಕೆಜಿ ಅಕ್ಕಿ ಜಾಸ್ತಿ ಕೊಡಲಿ. ಅದನ್ನು ಬಿಟ್ಟು ತೊಂದರೆ ಮಾಡುವಂತಹ ವರ್ತನೆಗಳು ಬಡವರ ವಿರುದ್ಧವಾಗಿದೆ. ಇವುಗಳ ಬಗ್ಗೆ ನಾವು ಪ್ರತಿಭಟನೆ ಮಾಡುತ್ತೇವೆ. ಕೇಂದ್ರ ಸರ್ಕಾರ ಮಾಡುತ್ತಿರುವ ಕುತಂತ್ರ ಜನತೆ ಮುಂದೆ ಇಡುತ್ತೇವೆ ಎಂದು ಹೇಳಿದರು. ಬಿಜೆಪಿ ಯಾವತ್ತೂ ಬಡವರ ಪರವಾಗಿ ಇರಲಿಲ್ಲ. ನಾವು 7 ಕೆಜಿ ಅಕ್ಕಿ ಕೊಟ್ಟರೆ, ಅವರು 5 ಕೆಜಿಗೆ ಇಳಿಸಿದರು. ಬಿಜೆಪಿ ಬಡವರ ವಿರೋಧಿ. ಷಡ್ಯಂತ್ರ ರಾಜಕಾರಣ, ಬಡವರ ಕಾರ್ಯಕ್ರಮದ ಮಾಡುವುದನ್ನು ತಡೆಹಿಡಿಯುವುದು ಬಿಜೆಪಿ ಪಕ್ಷದವರ ಪ್ರವೃತ್ತಿಯಾಗಿದೆ ಎಂದು ಟೀಕಿಸಿದರು.
ಶಕ್ತಿ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಎಲ್ಲ ಸಿದ್ಧತೆಗಳನ್ನು ನಡೆಸಿದೆ. 600 ಭರವಸೆಗಳನ್ನು ಕೊಟ್ಟು ಒಂದೂ ಈಡೇರಿಸದೇ ಇರುವ ಬಿಜೆಪಿಗೆ ಮಾತನಾಡುವ ನೈತಿಕತೆ ಇಲ್ಲ. ಬಸ್ನಲ್ಲಿ ಜನ ಜಾಸ್ತಿ ಆದ ಕೂಡಲೇ ಪೂರ್ವಭಾವಿ ತಯಾರಿ ಇಲ್ಲ ಅನ್ನೋದು ಸರಿಯಲ್ಲ. ಬಿಜೆಪಿಗೆ ಒಂದು ಕಡೆ ಅಭದ್ರತೆ ಕಾಡುತ್ತಿದೆ. ಇದು ರಾಷ್ಟ್ರವ್ಯಾಪಿ ಪ್ರಚಾರ ಆಗಿದ್ದರಿಂದ ಕೇಂದ್ರದ ಬಿಜೆಪಿ ಬುಡಕ್ಕೆ ಬಂದಿದೆ. ಹೀಗಾಗಿ ಬಡವರಿಗೆ ಸಿಗುವಂತಹ ಯೋಜನೆಗೆ ಅಡ್ಡ ಕತ್ತರಿ ಹಾಕಿ, ಊಹಾಪೋಹಗಳನ್ನು ಮಾಡಲಿಕ್ಕೆ ಹೊರಟಿದ್ದಾರೆ. ಹೊಸ ಯೋಜನೆಗಳು ಬಂದಾಗ ತೊಂದರೆಗಳು ಆಗುತ್ತದೆ. ಅವುಗಳನ್ನು ಸರಿಪಡಿಸುವ ತಾಕತ್ತು ಈ ಸರ್ಕಾರಕ್ಕೆ ಇದೆ ಎಂದರು.
ನೀರಿನ ಅಭಾವ ಉಂಟಾಗಿರುವ ಬಗ್ಗೆ ಮಾತನಾಡಿದ ಸಚಿವರು, ಈ ಬಗ್ಗೆ ಏನು ಕ್ರಮಕೈಗೊಳ್ಳಬೇಕೋ ಅದನ್ನು ಮಾಡಿದ್ದೇವೆ. ಆಯಾ ತಾಲ್ಲೂಕಿನಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ವಾರ ಮಳೆ ಬರುವ ನಿರೀಕ್ಷೆ ಇತ್ತು, ಆದರೆ ಮಳೆ ಬಂದಿಲ್ಲ. ಎಲ್ಲವನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತದೆ ಎಂದರು. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂಬ ಮಹಾದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಪ್ರೀತಿಯಿಂದ, ಅಭಿಮಾನದಿಂದ ಹೇಳುತ್ತಾರೆ. ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಆಗುತ್ತದೆ. ಇದು ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು.
ಪ್ರಧಾನಿಗಳು ದೇಶಕ್ಕಾಗಿ ಕೆಲಸ ಮಾಡಬೇಕು. ರಾಜ್ಯಗಳ ಬಡವರಿಗೆ ಸಹಾಯ ಮಾಡುವಾಗ ರಾಜಕಾರಣ ನುಸುಳಬಾರದು. ನೀರು, ಅಕ್ಕಿ, ಅನ್ನ ಇಂತವುಗಳಲ್ಲಿ ರಾಜಕಾರಣ ಮಾಡೋದು ಸರಿಯಲ್ಲ. ಹಸಿವಿನ ನೋವು ನನಗೆ ಗೊತ್ತಿದೆ. ದಯಮಾಡಿ ಪ್ರಧಾನಿಗಳಿಗೆ ವಿನಂತಿ ಮಾಡುತ್ತೇನೆ. ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ನವರು ಹತ್ತಲ್ಲ 15 ಕೆ.ಜಿ ಅಕ್ಕಿ ಕೊಡಬೇಕು: ಶಶಿಕಲಾ ಜೊಲ್ಲೆ