ಬಾಗಲಕೋಟೆ: "ನಮ್ಮ ಸರ್ಕಾರವನ್ನು ಅಲುಗಾಡಿಸಲು ಹಿಂದೆ ಹೇಗೆ ಆಪರೇಷನ್ ಕಮಲ ಮಾಡಿದ್ದಾರೆ, ಮತ್ತೆ ಆ ರೀತಿಯ ಅಲೋಚನೆ, ಪ್ರಯತ್ನ ಇರಬಹುದು ಎಂದು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯಿಂದ ಅರ್ಥ ಮಾಡಿಕೊಳ್ಳಬಹುದು" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಇಂದು ಬಾಗಲಕೋಟೆಯ ನವನಗರದಲ್ಲಿರುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿ ಮುಂದುವರೆಯುತ್ತಾರೆ ಗೊತ್ತಿಲ್ಲ, ಸಿಎಂ- ಡಿಸಿಎಂ ಸೇರಿ ರಾಜ್ಯ ಲೂಟಿ ಮಾಡ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಅವರ ಪ್ರಯತ್ನ ಈಡೇರುವುದಿಲ್ಲ, ನಮ್ಮಲ್ಲಿ ಸಹಮತವಿದೆ, ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ" ಎಂದರು.
"ಇವತ್ತು ಮುಖ್ಯವಾಗಿ ಆಗಬೇಕಿರೋದು ಜನಸಾಮಾನ್ಯರ ಕೆಲಸ, ನಾವು ಜನಗಳ ಕೆಲಸದ ಬಗ್ಗೆ ಗಮನ ಕೊಡಬೇಕು. ಬಿಜೆಪಿಯವರು ಆಪರೇಷನ್ ಮಾಡ್ತಾರೋ, ಇನ್ನೊಂದು ಮಾಡ್ತಾರೋ ಅದನ್ನು ಎದುರಿಸುವ ಶಕ್ತಿ ನಮಗೆ ಮತ್ತು ನಮ್ಮ ಪಕ್ಷಕ್ಕೆ ಇದೆ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ, ಜನ ನಮ್ಮನ್ನು ಇಲ್ಲಿ ಕೂರಿಸಿದ್ದಾರೆ. ಜನಪರವಾದ ಕೆಲಸ ಮಾಡುವುದು ಈಗ ನಮ್ಮ ಮುಂದೆ ಇರುವ ಗುರಿ. ಅವರು ಏನಾದರೂ ಹೇಳಲಿ, ನಾವು ಜನರಿಗೋಸ್ಕರ ಕೆಲಸ ಮಾಡುತ್ತೇವೆ" ಎಂದು ತಿಳಿಸಿದರು.
"ಬಿಜೆಪಿ ಯವರು ಅಂಬಾನಿ - ಅದಾನಿ ಅಂತವರಿಗೆ ಅನುಕೂಲ ಮಾಡುತ್ತಾರೆ. ನಾವು ಬಂದು ಅಂಬಣ್ಣನಿಗೆ, ತಿಮ್ಮಣ್ಣನಿಗೆ ಗ್ಯಾರಂಟಿ ಕೊಟ್ಟು ಸಹಾಯ ಮಾಡಿದ್ದೇವೆ. ಇದನ್ನು ಸಹಿಸುವುದಕ್ಕಾಗದೆ ಈ ರೀತಿಯ ಕಿಡಿಗೇಡಿ ಮಾತುಗಳನ್ನಾಡುತ್ತಿದ್ದಾರೆ. ಈ ರೀತಿಯ ಹೇಳಿಕೆಗಳಿಂದ ನಾವು ಧೃತಿಗೆಡುವುದಿಲ್ಲ, ನಮ್ಮ ಗುರಿಯಿಂದ ಅಲುಗಾಡುವುದಿಲ್ಲ. ನಾವು ಶ್ರೀಮಂತರ ವಿರುದ್ಧ ಇಲ್ಲ, ದುಡಿಯುವ ವರ್ಗದ ಜನರ ತಲೆಯ ಮೇಲೆ ಯಾರು ಹೆಜ್ಜೆ ಇಡಬಾರದು. ದುಡಿಯುವ ವರ್ಗದ ಜನರ ಪರವಾಗಿ ಕೆಲಸ ಮಾಡುವುದು ನಮ್ಮ ಮೊದಲನೇ ಆದ್ಯತೆ" ಎಂದು ಹೇಳಿದರು.
"ನಮ್ಮ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿಯವರು ಪ್ರಯತ್ನ ಮಾಡುತ್ತಿರಬಹುದು. ಆದರೆ ಬಡವರು ನಮಗೆ ಆಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದ ನಮ್ಮ ಕೈ ಹಿಡಿಯುತ್ತದೆ ಎಂದು ನಾವು ನಂಬಿದ್ದೇವೆ" ಎಂದ ಅವರು, ರಾಜ್ಯ-ಕೇಂದ್ರ ಸರ್ಕಾರಗಳ ಸಂಘರ್ಷದಲ್ಲಿ ಜನತೆಗೆ ಅನ್ಯಾಯ ಆಗುತ್ತಿದೆಯಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಯಾವ ಸಂಘರ್ಷ ಮಾಡುವಂತಹ ಉದ್ದೇಶ ನಮಗಿಲ್ಲ, ಸಂವಿಧಾನ ಬದ್ಧವಾಗಿ ಜನರಿಗೆ ಬರಬೇಕಾದ ಹಣವನ್ನು ನಾವು ಕೇಳಿದ್ದೇವೆ. ಸೆಪ್ಟೆಂಬರ್ 23ನೇ ತಾರೀಖಿನಿಂದ ಇಲ್ಲಿಯವರೆಗೆ ಎಂಟತ್ತು ಪತ್ರ ಬರೆದಿದ್ದೇವೆ. ಅಪಾಯಿಂಟ್ಮೆಂಟ್ ಕೊಟ್ಟರೇ ನಾವೇ ಅವರನ್ನು ಭೇಟಿಯಾಗಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇವೆ. ಇಲ್ಲಿ ಸಂಘರ್ಷ ಇಲ್ಲ. ನಾವು ಕರ್ನಾಟಕದ ಜನಗಳಿಗೆ ಬರಬೇಕಾದ ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದೇವೆ" ಎಂದರು.
ಇದನ್ನೂ ಓದಿ: ಮಧ್ಯಪ್ರದೇಶದ ವ್ಯಾಪಂ ಹಗರಣದ ಬಗ್ಗೆ ಮಾತನಾಡಿ, ರಾಜ್ಯದ ಬಗ್ಗೆ ಅಲ್ಲ: ಮೋದಿಗೆ ಸಚಿವ ಲಾಡ್ ಟಾಂಗ್