ಬಾಗಲಕೋಟೆ: ಸರ್ಕಾರ ಎಲ್ಲ ವರ್ಗದವರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತೆ. ಯಾವುದೇ ಸಮಾಜಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಮೀಸಲಾತಿ ಜಾರಿಗೆ ತರುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
ಬಾಗಲಕೋಟೆ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ಅವರು, ಸಿದ್ದರಾಮಯ್ಯ ಹೇಳಲಿ, ಜವಾಬ್ದಾರಿಯ ನಾಯಕರಿದ್ದಾರೆ. ಅವರು ಏನ್ ಹೇಳಬೇಕಾಗಿದೆಯೋ ಅದನ್ನು ಹೇಳಲಿ, ಜನರಿಗೆ ಏನು ಸಂದೇಶ ಕೊಡ್ತಾರೆ ಕೊಡಲಿ ಎಂದು ಆರೋಪಕ್ಕೆ ಕಾರಜೋಳ ಪ್ರತಿಕ್ರಿಯಿಸಿದರು.
ಎಐಸಿಸಿಗೆ ಖರ್ಗೆ ಅಧ್ಯಕ್ಷರಾಗೋ ವಿಚಾರವಾಗಿ ಮಾತನಾಡಿದ ಕಾರಜೋಳ, ಇನ್ನು ಆಯ್ಕೆ ಇಂದು ಮತದಾನ ಆಗಿದೆ. 19ಕ್ಕೆ ರಿಸಲ್ಟ್ ಬರುತ್ತೆ, ಬಂದ ಮೇಲೆ ಹೇಳ್ತೀನಿ. ಖರ್ಗೆ ಎಐಸಿಸಿ ಅಧ್ಯಕ್ಷರಾಗೋದರಿಂದ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಳುಗುವ ಹಡಗಾಗಿದ್ದು, ಮುಳುಗುವ ಹಡಗಿನಲ್ಲಿ ನಾವಿಕನನ್ನಾಗಿ ಖರ್ಗೆ ಅವರನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು 10 ವರ್ಷ ಯುಪಿಎ ಸರ್ಕಾರ ಇತ್ತು. ಅವಾಗಲೇ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದಿತ್ತು. ಅವಾಗ ಯಾಕೆ ಮಾಡಲಿಲ್ಲ. ಮಾಡಬೇಕಿತ್ತಲ್ಲ ಎಂದು ಪ್ರಶ್ನಿಸಿದರು.
ದೇಶದಲ್ಲಿ ಅಧಿಕಾರ ನಡೆಸುವಾಗ ಮಾಡಿದ್ರೆ ಅದಕ್ಕೊಂದು ಅರ್ಥ ಇತ್ತು. ರಾಜ್ಯದಲ್ಲಿ 9 ಬಾರಿನೋ 11 ಬಾರಿನೋ ಆಯ್ಕೆ ಆಗಿರುವ ಖರ್ಗೆ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡಬಹುದಿತ್ತು. ಯಾಕೆ ಮಾಡಲಿಲ್ಲ?. ಅಂತಾ ಕಾಂಗ್ರೆಸ್ ಹೈಕಮಾಂಡ್ಗೆ ಕಾರಜೋಳ ಪ್ರಶ್ನಿಸಿದರು.
ಕಾಂಗ್ರೆಸ್ ಉಳಿಯಲಿಕ್ಕೆ ಸಾಧ್ಯವಿಲ್ಲ: ಕಾಂಗ್ರೆಸ್ ನವರು ದೀನದಲಿತರನ್ನ ಓಟ್ ಬ್ಯಾಂಕ್ ಮಾಡಿಕೊಳ್ಳುವ ಸಲುವಾಗಿ ಅಷ್ಟೇ ರಾಜಕಾರಣ ಮಾಡುತ್ತಾರೆ. ದಲಿತರ ಉದ್ದಾರ ಆಗಲಿ, ಅವರಿಗೆ ಕೊಡುವುದಾಗಲಿ ಕಾಂಗ್ರೆಸ್ ಯಾವತ್ತೂ ಮಾಡಿಲ್ಲ ಎಂದು ಆರೋಪಿಸಿದ ಕಾರಜೋಳ ಅವರು, ಈಗ ಅದು ಮುಳುಗುತ್ತೆ ಅಂತ ಗೊತ್ತಾಗಿದೆ. ಅದಕ್ಕೆ ಮಾಡ್ತಿದ್ದಾರೆ. ಕಾಂಗ್ರೆಸ್ ಈ ದೇಶದಲ್ಲಿ ಉಳಿಯಲಿಕ್ಕೆ ಸಾಧ್ಯವಿಲ್ಲ ಎಂದರು.
ನಂತರ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ಬರುವ ವಿವಿಧ ಕಚೇರಿಗಳಿಗೆ ಒಟ್ಟು 40 ಹೊಸ ಬೊಲೆರೋ ವಾಹನಗಳನ್ನು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಸ್ತಾಂತರಿಸಿದರು. ನವನಗರದ ಕಲಾಭವನದ ಆವರಣದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹೊಸ ಬೊಲೇರೋ ವಾಹನಗಳಿಗೆ ಪೂಜೆ ಸಲ್ಲಿಸಿ, ನಂತರ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಿರ್ದೇಶಕ ಮಂಡಳಿ ಸಭೆಯಲ್ಲಿ ಅನುಮೋದನೆ: ಇದೇ ಸಂದರ್ಭದಲ್ಲಿ ಮಾತನಾಡಿದ ಕಾರಜೋಳ ಅವರು, ಕೃಷ್ಣಾ ಭಾಗ್ಯ ಜಲ ನಿಗಮದ 134ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಅನುಮೋದನೆಗೊಂಡಿದ್ದು, ಇದರಂತೆ 40 ಬೊಲೇರೋ ವಾಹನಗಳನ್ನು ನಿಗಮದಿಂದ ಖರೀದಿಸಲಾಗಿದೆ. ಇದರಲ್ಲಿ 6 ವಾಹನಗಳನ್ನು ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಕಚೇರಿಗೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ. ಹೆಚ್. ಪೂಜಾರ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್. ಶಿವಕುಮಾರ, ಮುಖ್ಯ ಇಂಜಿನಿಯರ್ ಹೆಚ್. ಸುರೇಶ, ಯುಕೆಪಿಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ಮನ್ಮಥಯ್ಯ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಓದಿ: ಸಮಯೋಚಿತ ತೀರ್ಮಾನಗಳಿಂದ ಜನರಿಗೆ ನೆರವಾಗಿ.. ಡಿಸಿಗಳಿಗೆ ಸಿಎಂ ಖಡಕ್ ಸೂಚನೆ