ಬಾಗಲಕೋಟೆ: ಮಳೆ, ಬೆಳೆ ಬಗ್ಗೆ ಭವಿಷ್ಯ ವಾಣಿ ಹೇಳುವ ವಿಶೇಷ ಪದ್ಧತಿಯನ್ನು ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಣಿ, ಪುಷ್ಯ, ಪುನನರ್ವಸು ಹಾಗೂ ಹಿಂಗಾರು ಮಳೆಗಳಲ್ಲಿ ಸ್ವಾತಿ, ಚಿತ್ತಿ ಮಳೆಗಳು ಅತಿ ಹೆಚ್ಚು ಸುರಿಯಲಿವೆ ಎಂಬುದು ಮುರನಾಳ ಮಳೆರಾಜೇಂದ್ರ ಮಠದ ವಾಣಿಯಾಗಿದೆ.
ಕೃಷಿಕರ ಮಠವೆಂದು ಖ್ಯಾತಿ ಪಡೆದಿರುವ ಮುರನಾಳ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಕಡುಬಿನ ಕಾಳಗ (ಮಳೆ, ಬೆಳೆ ಸೂಚನೆ) ದಲ್ಲಿ ಸೂಚನೆ ದೊರೆತಿದೆ. ಪ್ರತಿವರ್ಷದಂತೆ ಮುರನಾಳ ಮಳೆರಾಜೇಂದ್ರ ಮಠದ ಜಾತ್ರೆಯು ವಿಜೃಂಭಣೆಯಿಂದ ನಡೆದಿದ್ದು, ಜಾತ್ರೆಯ ಅಂಗವಾಗಿ ನಡೆಯುವ ಕಡುಬಿನ ಕಾಳಗ(ಮಳೆ, ಬೆಳೆ ಸೂಚನೆ)ಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ಜನರು ಕುತೂಹಲದಿಂದ ಕಾಯ್ದು ನಿಂತಿದ್ದರು. ಮಳೆ - ಬೆಳೆ ಕುರಿತಂತೆ ಮಠದ ವಾಣಿ ಕೇಳಿದ ರೈತರು ಪ್ರಸಕ್ತ ವರ್ಷದ ಸಾಧಕ-ಬಾಧಕಗಳನ್ನು ತಮ್ಮ ತಮ್ಮಲ್ಲಿಯೇ ಲೆಕ್ಕಹಾಕಿದರು.
ಈ ವರ್ಷದ ಮುಂಗಾರಿನಲ್ಲಿ ರೋಹಣಿ, ಪುಷ್ಯ ಪುನರ್ವಸು, ಆರಿದ್ರಾ, ಮೃಗಶಿರಾ ಮಳೆ ಉತ್ತಮ, ಹಿಂಗಾರಿನಲ್ಲಿ ಸ್ವಾತಿ,ಚಿತ್ತಿ, ಹುಬ್ಬಿ ಉತ್ತರಿ ಉತ್ತಮ, ಉತ್ತಮ ಮಳೆಗಳು ಸುರಿಯಲಿವೆ ಎಂಬುದಾಗಿ ಶ್ರೀ ಮಠದ ಸೂಚನೆ ದೊರೆಯಿತು ಎಂದು ಮಠಾಧೀಶರಾದ ಶ್ರೀಜಗನ್ನಾಥ ಮಹಾಸ್ವಾಮಿ ನೆರೆದ ಭಕ್ತಾಧಿಗಳಿಗೆ ತಿಳಿಸಿದರು.
ಕಡುಬಿನ ಕಾಳಗದ ವೈಶಿಷ್ಟ್ಯ: ಕಡುಬಿನ ಕಾಳಗದ ಮುಂಚೆ ನಡೆದ ಮಳೆರಾಜೇಂದ್ರಸ್ವಾಮಿಗಳ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ಸಾವಿರರು ಮಹಿಳೆಯರು ಆರತಿ ಹಾಗೂ ಪಂಚಬಿಂದಿಗೆಯೊಂದಿಗೆ ಪಾಲ್ಗೊಂಡಿದ್ದರು. ಗಂಗೆಯ ಪೂಜೆಗಾಗಿ ನಿರ್ಮಿಸಿರಿರುವ ಹೊಂಡದವರೆಗೆ ಮೆರವಣಿಗೆಯಲ್ಲಿ ಸಾಗಿದ ಗ್ರಾಮಸ್ಥರು ಗಂಗೆಯಲ್ಲಿ ಮಳೆರಾಜೇಂದ್ರಸ್ವಾಮಿ ಜಲಾಭಿಷೇಕ ಮಾಡಿ ಗಂಗೆಗೆ ಪೂಜೆ ಸಲ್ಲಿಸಿದ ಬಳಿಕ ಪಂಚ ಬಿಂದಿಗೆಗಳಲ್ಲಿ ಗಂಗೆ ತುಂಬುತ್ತಾರೆ.
ಹೀಗೆ ತುಂಬಲ್ಪಟ್ಟ ಪ್ರತಿ ಬಿಂದಿಯ ಮೇಲೆ ಎರಡೆರಡು ಮಳೆಗಳು ಹೆಸರನ್ನು ನಮೂದಿಸಲಾಗುತ್ತದೆ. ಪಂಚ ಬಿಂದಿಗೆ ಹೊತ್ತು ನಂತರ ಗಂಗಾ ಹೊಂಡದಿಂದ ಪುನಃ ಮೆರವಣಿಗೆಯಲ್ಲಿ ರಥೋತ್ಸವ ಇರುವ ಸ್ಥಳಕ್ಕೆ ಬರುತ್ತಾರೆ. ರಥೋತ್ಸವವನ್ನು ಪ್ರದಕ್ಷಣೆ ಹಾಕಿ ಪಂಚಬಿಂದಿಗೆ ಪೂಜೆ ಸಲ್ಲಿಸಿ ತರುವಾಯ ಮಳೆ - ಬೆಳೆ ಸೂಚನೆ ನೀಡಲಾಗುತ್ತದೆ.
ಮಳೆಗಳ ಹೆಸರನ್ನು ಹೊಂದಿರುವ ಬಿಂದಿಗೆಗಳ ಬಸಿಯುವಿಕೆ(ಸೋರಿಕೆ) ಆಧಾರದ ಮೇಲೆ ಮಳೆ, ಬೆಳೆ ಸೂಚನೆ ಹೊರ ಬೀಳುತ್ತದೆ. ಸೋರಿಕೆ ಪ್ರಮಾಣದ ಮೇಲೆಯೇ ಯಾವ ಮಳೆ ಹೆಚ್ಚು ಸುರಿಯುತ್ತದೆ ಹಾಗೂ ಯಾವುದು ಕಡಿಮೆಯಾಗುತ್ತದೆ ಎಂಬುದನ್ನು ಹೇಳಲಾಗುತ್ತದೆ.
ವಿಶಿಷ್ಟ ಪರಂಪರೆ ಹೊಂದಿರುವುದರಿಂದ ಮಳೆರಾಜೇಂದ್ರ ಮಠದ ಕಡುಬಿನ ಕಾಳಗವನ್ನು ರೈತಸಮುದಾಯ ಕುತೂಹಲದಿಂದ ನೋಡುತ್ತದೆ. ಆಧುನಿಕ ಯಗದ ಭರಾಟೆ ಮಧ್ಯೆಯು ಇಂತಹ ಆಚರಣೆ ನಡೆಸುವ ಮೂಲಕ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: 362 ಗೆಜೆಟೆಡ್ ಅಧಿಕಾರಿಗಳ ನೇಮಕ ಸಿಂಧುಗೊಳಿಸುವ ಕಾಯ್ದೆ ಜಾರಿ ಮಾಡಿ ಅಧಿಸೂಚನೆ