ಬಾಗಲಕೋಟೆ: ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಮಖಂಡಿ ತಾಲೂಕಿನ ಕೆಲ ಗ್ರಾಮಗಳು ಜಲಾವೃತಗೊಂಡು ನಡುಗಡ್ಡೆ ಆಗಿವೆ.
ಘಟಪ್ರಭಾ, ಮಲಪ್ರಭಾ ಜೊತೆಗೆ ಕೃಷ್ಣಾ ನದಿ ಕೂಡ ತುಂಬಿ ಹರಿಯುತ್ತಿರುವ ಪರಿಣಾಮ ಜಮಖಂಡಿ ತಾಲೂಕಿನಲ್ಲಿ ಆತಂಕ ಮೂಡಿಸಿದೆ. ಮುತ್ತೂರು ನಡುಗಡ್ಡೆ ಜನರಿಗೆ ಕಳೆದ ಪ್ರವಾಹದ ಕಹಿ ನೆನಪು ಕಣ್ಮುಂದೆ ಬರುವಂತಾಗಿದೆ. ಸದ್ಯ ನಡುಗಡ್ಡೆ ತೊರೆದು ತುಬಚಿ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
ಶೂರ್ಪಾಲಿ, ತುಬಚಿ, ಮುತ್ತೂರು, ಕಂಣವಾಡಿ ಗ್ರಾಮಗಳ ಕೆಲ ಪ್ರದೇಶಗಳು ನಡುಗಡ್ಡೆ ಆಗಿದ್ದು, ಬೋಟ್ನಲ್ಲಿ ಗಂಟು ಮೂಟೆ ಕಟ್ಟಿಕೊಂಡು, ದನ-ಕರುಗಳೊಂದಿಗೆ ಜನರು ಪಯಣ ಬೆಳೆಸಿದ್ದಾರೆ. ತುಬಚಿ, ಶೂರ್ಪಾಲಿಯಿಂದ ಜಂಬಗಿ ಕಡೆ ತೆರಳುವ ಮಾರ್ಗ ಸ್ಥಗಿತವಾಗಿದೆ. ಶೂರ್ಪಾಲಿ ಗ್ರಾಮದ ಪ್ರಸಿದ್ಧ ದೇವಾಲಯ ಲಕ್ಷ್ಮೀ ನರಸಿಂಹನಿಗೂ ಪ್ರವಾಹದ ಬಿಸಿ ತಟ್ಟಿದ್ದು, ಸಂಪೂರ್ಣ ಜಲಾವೃತವಾಗಿದೆ. ಅಪಾರ ಪ್ರಮಾಣ ನೀರಿನಿಂದಾಗಿ ಬೆಳೆದು ನಿಂತ ಬೆಳೆಗಳು ಸಹ ಜಲವೃತಗೊಂಡಿವೆ.