ಬಾಗಲಕೋಟೆ: ಚುನಾವಣೆ ದಿನ ಘೋಷಣೆ ಆದ ಬೆನ್ನಲ್ಲೇ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ತೀವ್ರಗೊಳ್ಳುತ್ತಿದೆ. ಜಿಲ್ಲೆಯ ತೇರದಾಳ ಮತಕ್ಷೇತ್ರದಲ್ಲಿ ಈ ಬಾರಿ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಕೂಗು ಹೆಚ್ಚಾಗಿದೆ. ಬಿಜೆಪಿ ಪಕ್ಷದ ಶಾಸಕರಾದ ಸಿದ್ದು ಸವದಿ ಅವರಿಗೆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಸಿದ್ದು ಸವದಿ ಮೂಲತಃ ಜಮಖಂಡಿ ತಾಲೂಕಿನ ಹಿರೇಪಡಸಗಿ ಗ್ರಾಮದವರಾಗಿದ್ದಾರೆ. ತೇರದಾಳ ಮತಕ್ಷೇತ್ರ ನೂತನವಾಗಿ ರಚನೆ ಆದ ಬಳಿಕ ತೇರದಾಳದಲ್ಲಿ ಸ್ಪರ್ಧೆ ಮಾಡಿ, ಶಾಸಕರಾಗಿ ಈಗ ತೇರದಾಳದಲ್ಲೇ ನೆಲೆಸಿದ್ದಾರೆ. ಶಾಸಕರಾಗಿ ಜೊತೆಗೆ ನೇಕಾರರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಇದರ ಜೊತೆಗೆ ಸ್ಥಳೀಯರಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಪಕ್ಷದವರೇ ಹೈಕಮಾಂಡ್ಗೆ ಒತ್ತಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಾಜು ಅಂಬಲಿ ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಕೆಲಸ ಕಾರ್ಯ ಮಾಡುತ್ತಾ ಬಂದಿದ್ದಾರೆ. ಈ ಬಾರಿ ನೇಕಾರರಿಗೆ ಮಾತ್ರ ಅವಕಾಶ ನೀಡಬೇಕು. ಈ ಮೂಲಕ ನೇಕಾರರಿಗೆ ಬೆಳೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ತೇರದಾಳ ಮತಕ್ಷೇತ್ರದ ರಬಕವಿ-ಬನ್ನಹಟ್ಟಿ, ಮಹಾಲಿಂಗಪುರ, ರಾಂಪೂರ, ಹೊಸೂರು ಸೇರಿದಂತೆ ಇತರ ಪ್ರದೇಶದಲ್ಲಿ ನೇಕಾರಿಕೆ ಉದ್ಯೋಗ ಹೆಚ್ಚಾಗಿದೆ. ನೇಕಾರಿಕೆಯನ್ನು ಅವಲಂಬಿಸಿಕೊಂಡು ಹೆಚ್ಚಿನ ಜನರು ಬದುಕುತ್ತಿದ್ದಾರೆ. ಈ ಹಿಂದೆ ಒಟ್ಟು 37 ಸಾವಿರ ಮಗ್ಗಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಕೇವಲ 8700ಕ್ಕೆ ಇಳಿದಿದೆ. ನೇಕಾರರಿಗೆ ಸೂಕ್ತ ಪ್ರೋತ್ಸಾಹ ಇಲ್ಲದ ಕಾರಣ ಗುಳೇ ಹೋಗುವುದು, ಮನೆ ಕಟ್ಟುವ ಕೆಲಸ ಕಾರ್ಯಗಳಿಗೆ ತೆರಳುವುದು, ಹೊಟೇಲ್ನಲ್ಲಿ ದುಡಿಯುವುದು ಸೇರಿದಂತೆ ಇತರ ಕೆಲಸ ಕಾರ್ಯದಲ್ಲಿ ತೊಡಗುತ್ತಿದ್ದಾರೆ ಎಂದು ನೇಕಾರರ ಮುಖಂಡರು ಹೇಳಿದ್ದಾರೆ.
ಈ ಬಾರಿ ಸ್ಥಳೀಯವಾಗಿ, ನೇಕಾರರು ಇರುವ ಮುಖಂಡರಿಗೆ ಮಾತ್ರ ಬಿಜೆಪಿ ಪಕ್ಷದ ಟಿಕೆಟ್ ನೀಡಬೇಕು ಎಂದು ಬಿಜೆಪಿ ಮುಖಂಡ ರಾಜು ಅಂಬಲಿ ಒತ್ತಾಯಿದ್ದಾರೆ. ಅಲ್ಲದೆ ಬೆಂಗಳೂರಿಗೆ ಹೋಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಬಿ ಎಸ್ ಯಡಿಯೂರಪ್ಪ, ನಳಿನ್ ಕುಮಾರ ಕಟೀಲ್ ಸೇರಿದಂತೆ ಪ್ರಮುಖ ಮುಖಂಡರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ತೇರದಾಳ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ನಲ್ಲಿ ಉಮಾಶ್ರೀ ಆಯ್ಕೆ ಆಗಿದ್ದು, ಬಿಜೆಪಿಯಲ್ಲಿ ಸಿದ್ದು ಸವದಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಆಪ್ ಪಕ್ಷದ ಮುಖಂಡರಾದ ಅರ್ಜುನ ಹಳೇಗೌಡರ ಅವರಿಗೆ ಟಿಕೆಟ್ ಅಂತಿಮವಾಗಿದೆ. ಈಗಾಗಲೇ ಪ್ರಚಾರ ಸಹ ಜೋರಾಗಿ ನಡೆಸಿದ್ದಾರೆ.
ಇನ್ನೊಂದೆಡೆ ಬಿಜೆಪಿ ಮುಖಂಡರಾದ ಸುಮಂಗಲಾ ಕೋಟಿ ತೇರದಾಳ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಮುಖಂಡರಲ್ಲಿ ಒತ್ತಾಯಿಸಿದ್ದಾರೆ. ಬಿಜೆಪಿಯ ಸಕ್ರಿಯ ಕಾರ್ಯಕರ್ತೆಯಾಗಿ, ರಾಜ್ಯದ ನೇಕಾರ ಪ್ರಕೋಷ್ಟದ ರಾಜ್ಯ ಸದಸ್ಯರಾಗಿ, ಆರು ಜಿಲ್ಲೆಯ ಪ್ರಭಾರಿ ಆಗಿ, ಕರ್ನಾಟಕ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮಹಿಳಾ ದಿನಾಚರಣೆ ಅಂಗವಾಗಿ 2023 ಮಾರ್ಚ್ನಲ್ಲಿ ರಾಜ್ಯ ಸರ್ಕಾರ, ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿತ್ತು.
ನಾನು ವಿಜಯಪುರದಲ್ಲಿದ್ದರೂ ತೇರದಾಳ ಮತಕ್ಷೇತ್ರದಲ್ಲಿ ಕೆಲಸ ಕಾರ್ಯ ಮಾಡಿಕೊಂಡು ಕ್ಷೇತ್ರದಲ್ಲಿ ಚಿರಪರಿಚಿತನಾಗಿದ್ದೇನೆ. ಈ ಹಿನ್ನೆಲೆ ತೇರದಾಳ ಮತಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ಸುಮಂಗಲಾ ಕೋಟಿ ಮುಖಂಡರಿಗೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ : ಆಕಾಂಕ್ಷಿಗಳ ಟಿಕೆಟ್ ನೀಡಲು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ ಬಿಜೆಪಿ