ಬಾಗಲಕೋಟೆ: ಹಿಜಾಬ್-ಕೇಸರಿ ಸಂಘರ್ಷದ ಕಾರಣಕ್ಕೆ ಇಂದು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣ ಬಂದ್ಗೆ ಕರೆ ನೀಡಲಾಗಿದ್ದು, ಸ್ವಯಂಘೋಷಿತವಾಗಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
ಜಿಲ್ಲೆಯಲ್ಲಿ ನಿನ್ನೆ (ಮಂಗಳವಾರ) ಹಿಜಾಬ್-ಕೇಸರಿ ವಿವಾದ ತಾರಕಕ್ಕೇರಿತ್ತು. ಕಲ್ಲು ತೂರಾಟ ನಡೆದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ಸಂಬಂಧ ಪೊಲೀಸರು ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಲ್ಲದೇ, ಪ್ರತಿಭಟನೆಯ ವೇಳೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಹಲ್ಲೆ ಖಂಡಿಸಿ ಇಂದು ಹಿಂದೂಪರ ಸಂಘಟನೆಗಳು ಸ್ವಯಂಪ್ರೇರಿತ ಬನಹಟ್ಟಿ ಪಟ್ಟಣ ಬಂದ್ಗೆ ಕರೆ ನೀಡಿದ್ದವು.
ಇದನ್ನೂ ಓದಿ: ಹಿಜಾಬ್-ಕೇಸರಿ ಶಾಲು ವಿವಾದ: ಬನಹಟ್ಟಿಯಲ್ಲಿ ಕಲ್ಲು ತೂರಾಟ
ಪೊಲೀಸರೊಂದಿಗೆ ಮಾತಿನ ಚಕಮಕಿ: ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಸೇರಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ ಪ್ರತಿಭಟನಾಕಾರರನ್ನು ತಡೆದಿದ್ದು, ಹಿಂದೂಪರ ಸಂಘಟನೆ ಮುಖಂಡರು ಹಾಗು ಪೊಲೀಸರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೋಮು ಸಂಘರ್ಷಕ್ಕೆ ಕಾರಣವಾಗುವವರು ಯಾರೇ ಆಗಲಿ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ 15 ಜನರನ್ನು ಬಂಧಿಸಲಾಗಿದೆ. ನೀವು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಹೋಗಬೇಕು. ಯಾರೂ ಕಾನೂನು ಉಲ್ಲಂಘನೆ ಮಾಡಬಾರದು ಎಂದರು.