ಬಾಗಲಕೋಟೆ : ಕಿಡ್ನಿ ಸ್ಟೋನ್ ಹಾಗೂ ಪಿತ್ತಕೋಶದ ನೋವಿನಿಂದ ಬಳಲುತ್ತಿದ್ದ ಮಾಜಿ ಸಚಿವ ಎಚ್.ವೈ. ಮೇಟಿ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ವೈದ್ಯರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಕಿಡ್ನಿ ಸ್ಟೋನ್ನಿಂದ ಬಳಲುತ್ತಿದ್ದು, ಕಳೆದ 25ರಂದು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ಸ್ಟೋನ್ ಗಾತ್ರ 60 ಎಂಎಂ ಇದ್ದ ಕಾರಣ ನೋವು ತಾಳಲಾರದೆ ತೀವ್ರ ಅಸ್ವಸ್ಥರಾಗಿದ್ದರು. ಅಲ್ಲದೇ ವಿಪರೀತ ಕಫ ಆದ ಪರಿಣಾಮ ವಾಂತಿಯೂ ಶುರುವಾಗಿತ್ತು, ಹೀಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಬಾಗಲಕೋಟೆ ವೈದ್ಯರು ಸಲಹೆ ನೀಡಿದ ಹಿನ್ನೆಲೆ ಕುಟುಂಬಸ್ಥರು ಏರ್ ಆ್ಯಂಬ್ಯುಲೆನ್ಸ್ ಮೂಲಕ ಮೇಟಿಯವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನು ಮೇಟಿ ಅವರನ್ನು ಕರೆದೊಯ್ಯುವ ವೇಳೆ ಹೆಲಿಕಾಪ್ಟರ್ ಸರಿಯಾಗಿ ಮೇಲೆ ಏರಲಿಲ್ಲ. ಹೀಗಾಗಿ ಮೊದಲಿಗೆ ನಾಲ್ಕು ಸುತ್ತು ತಿರುಗಿ ಕೆಳಗೆ ಇಳಿಸಲಾಯಿತು. ಲೋಡ್ ಆಗಿರುವುದರಿಂದ ಮೇಟಿ ಅವರ ಪುತ್ರ ಮಲ್ಲಿಕಾರ್ಜುನ ಎಂಬುವವರನ್ನು ಕೆಳಗೆ ಇಳಿಸಲಾಯಿತು. ನಂತರವೂ ಸಹ ಸರಿಯಾಗಿ ಮೇಲೆ ಏರದೆ ಕೆಲ ಸಮಯ ಆತಂಕಕ್ಕೆ ಕಾರಣವಾಯಿತು. ನಂತರ ನಿಧಾನವಾಗಿ ಪೈಲೆಟ್ ಹೆಲಿಕಾಪ್ಟರ್ ಅನ್ನು ಮೇಲೇರಿಸುವುದರಲ್ಲಿ ಯಶಸ್ಸು ಹೊಂದಿ ಬೆಂಗಳೂರಿನತ್ತ ಹೆಲಿಕಾಪ್ಟರ್ ಸಾಗಿತು.