ಬಾಗಲಕೋಟೆ: ನೆರೆ ಪ್ರವಾಹ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ, ಮುಧೋಳ ತಾಲೂಕಿನ ಮಳಲಿ ಗ್ರಾಮದ ಪ್ರವಾಹ ಸಂತ್ರಸ್ತರು ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸಿದ್ದಾರೆ.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮತ ಕ್ಷೇತ್ರದಲ್ಲಿ ಬರುವ ಹಿನ್ನೆಲೆ ರಾಜಕೀಯ ಮಾಡುತ್ತಿದ್ದು, ಅವರಿಗೆ ಬೇಕಾದವರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಘಟಪ್ರಭಾ ನದಿಯ ಪ್ರವಾಹದಿಂದ ಮನೆ, ಜಮೀನು ಕಳೆದುಕೊಂಡಿದ್ದರೂ ಇದುವರೆಗೆ ಹತ್ತು ಸಾವಿರ ರೂಪಾಯಿಗಳ ಪರಿಹಾರ ಧನ ನೀಡಿಲ್ಲ. ಬಿದ್ದ ಮನೆಗಳ ಸರ್ವೆ ಕಾರ್ಯ ನಡೆದಿಲ್ಲ. ಸುಳ್ಳು ದಾಖಲೆಯಿಂದ ಒಂದೇ ಮನೆಯಲ್ಲಿ ನಾಲ್ವರಿಗೆ ಪರಿಹಾರ ಧನ ವಿತರಣೆ ಮಾಡಲಾಗುತ್ತಿದೆ. ಆದರೆ, ನಿಜವಾದ ಸಂತ್ರಸ್ತರಿಗೆ ಪರಿಹಾರ ಧನ ವಿತರಣೆ ಆಗಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ, ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ದುರಗೇಶ ರುದ್ರಾಕ್ಷಿ, ಸಂತ್ರಸ್ತರ ಸಮಸ್ಯೆ ಆಲಿಸಿದರು. ಸರ್ಕಾರದ ನಿಯಮದಂತೆ ಯಾರಿಗೂ ಅನ್ಯಾಯ ಆಗದಂತೆ ಸರಿಯಾದ ಪರಿಹಾರ ಧನ ಹಾಗೂ ಸರ್ವೆ ಕಾರ್ಯ ನಡೆಯಲಿದೆ ಎಂದು ಭರವಸೆ ನೀಡಿದರು. ನಾಲ್ಕು ದಿನದಲ್ಲಿ ತಮ್ಮ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ, ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿರುವ ಸಂತ್ರಸ್ತರು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ.