ಬಾಗಲಕೋಟೆ: ಕೊರೊನಾ ಭೀತಿಯ ಸಮಯದಲ್ಲಿ ಲಾಕ್ಡೌನ್ ಆದ ಪರಿಣಾಮ ಉದ್ದಿಮೆ - ಉದ್ಯೋಗ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ. ಆದರೆ ಇಂತಹ ಸಮಯವನ್ನು ಸದೋಪಯೋಗ ಪಡೆದುಕೊಂಡ ಯುವ ರೈತನೊಬ್ಬ ರಾಸಾಯನಿಕ ಇಲ್ಲದೇ ಕಬ್ಬಿನಿಂದ ಗುಣಮಟ್ಟದ ವಿವಿಧ ಬಗೆಯ ಬೆಲ್ಲ ತಯಾರಿಸುತ್ತಿದ್ದಾರೆ. ಇದನ್ನು ದೇಶ - ವಿದೇಶಗಳಿಲ್ಲಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗುತ್ತಿದ್ದಾರೆ.
ಕೊರೊನಾ ರೋಗ ಹರಡದಂತೆ ಶುಂಠಿ, ಮೆಣಸು, ಲವಂಗಗಳಿಂದ ಸಾವಯವ ಬೆಲ್ಲವನ್ನು ತಯಾರು ಮಾಡಿ, ಮಾರಾಟ ಮಾಡುತ್ತಿದ್ದು, ಇದೀಗ ಬೇಡಿಕೆ ಹೆಚ್ಚಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಜಿಲ್ಲೆಯ ರಬಕವಿ - ಬನ್ನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದಲ್ಲಿರುವ ಈ ಯುವ ರೈತ ಮಹಾಲಿಂಗಪ್ಪ ಹಿಟ್ನಾಳ ಎಂಬುವವರು ಲಾಕ್ಡೌನ್ ಸಮಯದಲ್ಲಿ ಹೊಸ ಬಗೆಯ ಯೋಚನೆ ಮಾಡಿ, ಬೆಲ್ಲ ಉತ್ಪಾದನೆ ಮಾಡಿ, ಸಾಕಷ್ಟು ಲಾಭ ಪಡೆದುಕೊಂಡಿದ್ದಾರೆ.
ಗ್ರಾಮಸ್ಥರನ್ನು ಉಪಯೋಗಿಸಿಕೊಂಡು ಉದ್ಯೋಗ
ಕೊರೊನಾ ಹಿನ್ನೆಲೆ ಉದ್ಯೋಗ ಬಿಟ್ಟು ಬಂದ ಗ್ರಾಮಸ್ಥರನ್ನು ಬಳಕೆ ಮಾಡಿಕೊಂಡು, ತಮ್ಮದೇ ಆದ ಒಂದು ಎಕರೆ ಪ್ರದೇಶದ ಜಮೀನಿನಲ್ಲಿ ಆಲೆ ಮನೆ ನಿರ್ಮಿಸಿಕೊಂಡು ರೈತರಿಂದ ಕಬ್ಬು ಖರೀದಿಸಿ, ಗುಣಮಟ್ಟದ ಬೆಲ್ಲವನ್ನು ತಯಾರಿಸುತ್ತಿದ್ದಾರೆ.
ಶುಂಠಿ, ಮೆಣಸು, ಏಲಕ್ಕಿ, ತುಪ್ಪ, ಲವಂಗ, ದೇಸಿ ತುಪ್ಪ ಸೇರಿದಂತೆ ವಿವಿಧ ಪದಾರ್ಥಗಳಿಂದ ಹತ್ತು ಬಗೆಯ ಬೆಲ್ಲವನ್ನು ತಯಾರಿಸಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ದುಬೈ ಹಾಗೂ ಆಸ್ಟ್ರೇಲಿಯಾಕ್ಕೂ ಈ ಬೆಲ್ಲ ರಫ್ತು ಮಾಡುವ ಮೂಲಕ ಆರ್ಥಿಕವಾಗಿ ಸಧೃಡರಾಗುವ ಜೊತೆಗೆ ಸ್ಥಳೀಯರಲ್ಲಿಯೂ ಉದ್ಯೋಗ ಬೆಳೆಸುತ್ತಿದ್ದಾರೆ.
ಔಷಧೀಯ ಗುಣಗಳ ಬೆಲ್ಲ ತಯಾರಿಕೆ
ಕೇವಲ ಬೆಲ್ಲ ಅಷ್ಟೇ ಅಲ್ಲದೆ ವಿವಿಧ ಬಗೆಯ ಔಷಧಿ ಗುಣಗಳನ್ನು ಹೊಂದಿರುವ ಬೆಲ್ಲ ಹಾಗೂ ಪೌಡರ್ ಬೆಲ್ಲ ಮತ್ತು ದ್ರವ ಬೆಲ್ಲವನ್ನು ತಯಾರು ಮಾಡಿ, ಮಾರಾಟ ಮಾಡುತ್ತಿದ್ದಾರೆ. ಪ್ರತಿ ದಿನ ರೈತರಿಂದ 25 ಟನ್ ಕಬ್ಬು ಖರೀದಿಸಿ, 2.5.ಟನ್ನಷ್ಟು ಬೆಲ್ಲ ತಯಾರು ಮಾಡುತ್ತಾರೆ. ಆದರೆ ಬೇಡಿಕೆಯಷ್ಟು ಬೆಲ್ಲ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿ ಆಲೆಮನೆ ಮಾಡಿರುವುದಕ್ಕೆ ಸ್ಥಳೀಯ ಯುವಕರಿಗೂ ಉದ್ಯೋಗ ಸಿಕ್ಕಿದಂತಾಗಿದೆ.
ಪ್ರತಿ ಕೆಜಿಗೆ 45 ರಿಂದ 225 ರೂ. ದರ
ಸಕ್ಕರೆ ಸೇರಿದಂತೆ ಯಾವುದೇ ರಾಸಾಯನಿಕ ಪದಾರ್ಥ ಇಲ್ಲದೆ, ಗುಣಮಟ್ಟದ ನೈಜ ಬೆಲ್ಲವನ್ನು ಉತ್ಪಾದನೆ ಮಾಡುತ್ತಿದ್ದು, ಪ್ರತಿ ಕೆಜಿಗೆ 45ರಿಂದ 225 ರೂಪಾಯಿಗಳ ವರೆಗೆ ದರ ನಿಗದಿ ಮಾಡಲಾಗಿದೆ. ಈ ಬೆಲ್ಲವು ರೋಗ ನಿರೋಧಕ ಶಕ್ತಿ ಬೆಳೆಸುವ ಜೊತೆಗೆ, ಆರೋಗ್ಯಕರ ಬೆಳೆವಣಿಗೆಗೆ ಸಹಾಯಕಾರಿಯಾಗಿದೆ. ಹೀಗಾಗಿ ಇಂದಿನ ಕೊರೊನಾ ಸಮಯದಲ್ಲಿ ಇವರಿಗೆ ಸಾಕಷ್ಟು ಬೇಡಿಕೆ ಇದೆ.
ಆದರೆ, ಕೊರೊನಾ ಲಾಕ್ಡೌನ್ ಸಮಯದಲ್ಲಿ ಹೆಚ್ಚಿನ ಉತ್ಪಾದನೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಉತ್ಪಾದನೆ ತಕ್ಕಂತೆ ಮಾರಾಟ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ಹೀಗೆ ಹೊಸ ಬಗೆಯ ವಿಚಾರ ಮಾಡಿಕೊಂಡು ಬೆಲ್ಲ ತಯಾರಿಸುವ ಮೂಲಕ ಆರ್ಥಿಕ ಸಂಕಷ್ಟದಿಂದ ದೂರಾಗಿ ಯುವ ರೈತ ಗಮನ ಸೆಳೆದಿದ್ದಾರೆ.