ಬಾಗಲಕೋಟೆ: ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿಮಾನ ಬಳಗದ ಕಾರ್ಯಕರ್ತರು ಸಭೆ ಆಯೋಜಿಸುವ ಮೂಲಕ ಭೀಮಸೇನ ಚಿಮ್ಮಕಟ್ಟಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬಾದಾಮಿ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಸೇರಿದ ಅಭಿಮಾನ ಬಳಗ ಕರೆದ ಸಭೆಯಲ್ಲಿ ಕಾರ್ಯಕರ್ತರು ಕೊನೆ ಗಳಿಗೆಯಲ್ಲಾದರೂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದರು. ಇನ್ನೂ ಕಾಲಾವಕಾಶ ಇದೆ. ಏಪ್ರಿಲ್ 19ರ ವರೆಗೆ ಅವರು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಮುಖಂಡರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರ ಆಪ್ತ ಹೊಳಬಸು ಶೆಟ್ಟರ್, ಎಂ.ಬಿ.ಹಂಗರಗಿ, ರಾಜ ಮಹಮ್ಮದ ಬಾಗವಾನ, ಹನಮಂತ ಯಂಕಪ್ಪನವರ, ಪಿ.ಆರ್.ಗೌಡರ, ಸಂಜೀವ ಬರಗುಂಡಿ ಸೇರಿದಂತೆ ಇತರ ಮುಖಂಡರು ವೇದಿಕೆಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಎರಡನೇಯ ಕ್ಷೇತ್ರವನ್ನಾಗಿ ಬಾದಾಮಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಮುಂದೆ ಮುಖ್ಯಮಂತ್ರಿ ಆಗಲಿರುವ ಅವರು ಈ ಕ್ಷೇತ್ರದ ಅಧಿದೇವತೆ ಬನಶಂಕರಿ ದೇವಿಯ ಆಶೀರ್ವಾದ ಸಿಕ್ಕು ಮತ್ತೆ ಸಿಎಂ ಆಗುವ ಅವಕಾಶ ಇದೆ ಎಂದರು.
ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಮುಖಂಡರು ಒತ್ತಾಯ ಮಾಡುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಘೋಷಣೆ ಆಗಿರುವ ಭೀಮಸೇನೆ ಚಿಮ್ಮನಕಟ್ಟಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಬಾದಾಮಿ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದಿದ್ದಾರೆ. ಮತ್ತೆ ಸಿಎಂ ಆಗಿದ್ದಲ್ಲಿ ಬಾದಾಮಿ ಇನ್ನಷ್ಟು ಅಭಿವೃದ್ಧಿ ಮಾಡಬಹುದು ಎಂದು ತಿಳಿಸಿದ್ದಾರೆ.
ರಸ್ತೆ ತಡೆದು ಪ್ರತಿಭಟನೆ: ಅಕ್ಕಮಹಾದೇವಿ ಕಲ್ಯಾಣ ಮಂಟಪದಿಂದ ರಾಮದುರ್ಗ ವೃತ್ತದವರೆಗೆ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿ ಬಾದಾಮಿಯಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡುವಂತೆ ಆಗ್ರಹಿಸಿದರು.