ಬಾಗಲಕೋಟೆ: ಸಿದ್ದರಾಮಯ್ಯ ತುರ್ತಾಗಿ ಸಿಎಂ ಆಗಬೇಕು ಅಂತಾರೆ. ಸಿದ್ದರಾಮಯ್ಯ ಅಷ್ಟೇ ಅಲ್ಲ, ಈ ದೇಶದಲ್ಲಿ ಕಾಂಗ್ರೆಸ್ ಈಗ ಅವಸಾನದ ಕಾಲದಲ್ಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿನಾ ಕಾರಣ ದೇಶದ ಪ್ರಧಾನಿಯನ್ನಾಗಲಿ, ರಾಜ್ಯ ಸರ್ಕಾರವನ್ನಾಗಲಿ ಆರೋಪ ಮಾಡುವುದನ್ನು ಬಿಡಿ. ಇಂತಹ ಕಠಿಣ ಸಂದರ್ಭದಲ್ಲಿ ಒಳ್ಳೆಯ ಸಲಹೆ ನೀಡಿ. ವಿಪಕ್ಷ ನೀಡುವ ಉತ್ತಮ ಸಲಹೆಯನ್ನ ಅನುಸರಿಸುತ್ತೇವೆ. ಸರ್ಕಾರದ ಎಲ್ಲಾ ಕಾರ್ಯಕ್ರಮ ವಿರೋಧಿಸಿದರೆ ಟೀಕೆಯೇ ವಿಪಕ್ಷದ ಗುರಿ ಎನಿಸುತ್ತದೆ. ಅನುಭವಿ ರಾಜಕಾರಣಿ ಆಗಿರುವ ಸಿದ್ದರಾಮಯ್ಯ ಒಳ್ಳೆಯ ಸಲಹೆ ನೀಡಲಿ ಎಂದು ಕೇಳುತ್ತೇನೆ ಎಂದರು.
ಡಿಸಿಗಳ ಜೊತೆ ಸಭೆಗೆ ಅವಕಾಶ ನೀಡದೇ ಇರೋದಕ್ಕೆ ಸಿದ್ದರಾಮಯ್ಯ ಹಕ್ಕು ಚ್ಯುತಿ ಮಂಡನೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯಗೆ ಡಿಸಿಗಳ ಜೊತೆ ಸಭೆ ಮಾಡ್ತೀನಿ ಅನ್ನೋ ಹುಚ್ಚು ಯಾಕೆ ಅಂತ ನನಗೆ ಗೊತ್ತಿಲ್ಲ. ಸಭೆ ನಡೆಸಲು ಅವಕಾಶ ಇಲ್ಲ. ಬೇಕಿದ್ದರೆ ಎಲ್ಲಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಿ, ತಪ್ಪೇನಿಲ್ಲ. ಮಾಹಿತಿ ಒದಗಿಸಲು ಸೂಚನೆ ಕೊಡುತ್ತೇವೆ ಎಂದರು.
ಸಿದ್ದರಾಮಯ್ಯ ತಮ್ಮ ಕಾಲದಲ್ಲಿ ಏನೆಲ್ಲಾ ಆದೇಶ ಮಾಡಿದ್ದಾರೆ ಅದನ್ನೆಲ್ಲ ಫೈಲ್ ತೆಗೆದು ಓದಲಿ. ಅವರ ಪಕ್ಷದ ಡಿಸಿಎಂ ಪರಮೇಶ್ವರ್ ರಿವೀವ್ ಮಾಡ್ತೀನಿ ಅಂದಾಗಲೇ ಅವಕಾಶ ನೀಡಿಲ್ಲ. ಯಡಿಯೂರಪ್ಪನವರು ಮತ್ತು ನಾವು ಬಾಗಲಕೋಟೆ ಡಿಸಿ ಕಚೇರಿ ಎದುರು ಮಲಗಿದ್ದೆವು. ಆದ್ರೂ ಸ್ವಲ್ಪ ಮಾಹಿತಿ ಸಹ ಕೊಡಲಿಲ್ಲ. ಒಂದು ಪೀಸ್ ಪೇಪರ್ ಸಹ ಕೊಡಲಿಲ್ಲ. ಆ ರೀತಿಯ ನಡವಳಿಕೆ ಯಾವಾಗಲೂ ಕಾಂಗ್ರೆಸ್ ಸರ್ಕಾರದ್ದಿದೆ ಎಂದು ಕಾರಜೋಳ ತಿರುಗೇಟು ನೀಡಿದರು.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಯಡಿಯೂರಪ್ಪ ಅವರು ಪೂರ್ಣಾವಧಿ ಸಿಎಂ ಆಗಿರ್ತಾರೆ. ನಾಯಕತ್ಚ ಬದಲಾವಣೆ ವಿಚಾರ ಗಾಳಿ ಸುದ್ದಿ. ಮಾಧ್ಯಮಗಳು ಈ ಗಾಳಿ ಸುದ್ದಿಗೆ ರೆಕ್ಕೆಪುಕ್ಕ ಹಚ್ಚುತ್ತಿವೆ. ಕೊರೊನಾ ಮತ್ತು ಪ್ರವಾಹ ಸಂದರ್ಭದಲ್ಲಿ ಬಿಎಸ್ವೈ ಸರ್ಕಾರ ಉತ್ತಮ ಆಡಳಿತ ನೀಡಿದೆ. ಸಾಮಾಜಿಕ ಕಳಕಳಿಯಿಂದ ಸಿಎಂ ಕೆಲಸ ಮಾಡಿದ್ದಾರೆ. ಹೀಗಾಗಿ ಸಿಎಂ ಬಿಎಸ್ವೈ ಸರ್ಕಾರದ ಪೂರ್ಣಾವಧಿಯಲ್ಲಿರುತ್ತಾರೆ ಎಂದು ಡಿಸಿಎಂ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.
ಓದಿ: ಲಾಕ್ಡೌನ್ ವಿಸ್ತರಣೆ ಬಗ್ಗೆ ಜೂನ್ 6ರ ವೇಳೆಗೆ ಅಂತಿಮ ತೀರ್ಮಾನ: ಬಿಎಸ್ವೈ