ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಕೋವಿಡ್ ರೋಗಿಗಳಿಗೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ಮಾತ್ರ ಶ್ವಾಸಕೋಶದಲ್ಲಿ ಕೊರೊನಾ ರೋಗದ ಲಕ್ಷಣ ಕಾಣುತ್ತದೆ. ಈ ಹಿನ್ನೆಲೆ ಕೊರೊನಾ ಅಂದಾಗ ಆಸ್ಪತ್ರೆಯಲ್ಲಿ ಮೊದಲು ಸಿಟಿ ಸ್ಕ್ಯಾನ್ ಮಾಡಿಸಬೇಕಾಗಿ ವೈದ್ಯರು ತಿಳಿಸುತ್ತಾರೆ.
ಖಾಸಗಿ ಆಸ್ಪತ್ರೆಯಲ್ಲಿ ಶ್ವಾಸಕೋಶದ ಸಿಟಿ ಸ್ಕ್ಯಾನ್ ಮಾಡಿಸಲು ಸಾವಿರಾರು ರೂಪಾಯಿ ವೆಚ್ಚ ತಗುಲುತ್ತದೆ. ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸ್ಕ್ಯಾನ್ ಮಾಡುತ್ತಾರೆ. ಲ್ಯಾಬ್ ಸಿಬ್ಬಂದಿ ಪ್ರತಿನಿತ್ಯ ಕೋವಿಡ್ ರೋಗಿಗಳ ಶ್ವಾಸಕೋಶದ ಸ್ಕ್ಯಾನ್ ಮಾಡುತ್ತಾರೆ. ಇವರು ಸಹ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಾರೆ.
ಪ್ರತಿದಿನ ಸುಮಾರು 30ಕ್ಕೂ ಹೆಚ್ಚು ಕೊರೊನಾ ರೋಗಿಗಳ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ. ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ಸುಮಾರು 891 ಜನರಿಗೆ ಸಿಟಿ ಸ್ಕ್ಯಾನ್ ಮಾಡಿದ್ದು, ಕೋವಿಡ್ ರೋಗ ಪತ್ತೆ ಮಾಡಲು ನೆರವಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗಿದ್ದು, ಹಲವರ ಜೀವ ಉಳಿದಿದೆ.
ಇದನ್ನೂ ಓದಿ: ಎಸ್ಎನ್ಆರ್ ಆಸ್ಪತ್ರೆಯಲ್ಲಿ ಇನ್ನೊಂದು ಆಕ್ಸಿಜನ್ ಪ್ಲಾಂಟ್: ಸಂಸದ ಮುನಿಸ್ವಾಮಿ
ರಾಜ್ಯ ಸರ್ಕಾರದ ಅನುದಾನದಿಂದ ಎರಡು ವರ್ಷಗಳ ಹಿಂದೆ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಯಂತ್ರವನ್ನು ಅಳವಡಿಸಲಾಗಿದೆ. ಈಗ ಕೋವಿಡ್ ರೋಗ ಹಿನ್ನೆಲೆ ಅದು ಬಹಳಷ್ಟು ಅನುಕೂಲವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ವೆಚ್ಚದಲ್ಲಿ ಆಗುವ ಸ್ಕ್ಯಾನ್ ಇಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಈ ಮೂಲಕ ಜನತೆ ಶ್ವಾಸಕೋಶ ಸೇರಿದಂತೆ ಯಾವುದೇ ಬಗೆಯ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಲು ಅವಕಾಶ ಇದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ತಿಳಿಸಿದ್ದಾರೆ.