ಬಾಗಲಕೋಟೆ: ಬೀದಿ ಬೀದಿ ಅಲೆಯುತ್ತಿದ್ದ ವೃದ್ಧೆಯೋರ್ವಳ ಪಾಲನೆ ಮಾಡಿ, ಬಳಿಕ ಅವರ ಸಂಬಂಧಿಕರಿಗೆ ಒಪ್ಪಿಸುವ ಕಾರ್ಯವನ್ನು ಇಲಕಲ್ಲ ಪಟ್ಟಣದ ಸಮಾಜ ಸೇವಕಿ ಜಯಶ್ರೀ ಶಾಲಿಮಠ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ರಾಜ್ಮ ಡೊಂಗ್ರಿ ಎನ್ನುವ ಅಜ್ಜಿ ಸುಮಾರು ನಾಲ್ಕೈದು ದಿನಗಳಿಂದ ಇಳಕಲ್ ನಗರದಲ್ಲಿ ಯಾರೋ ಬಿಟ್ಟು ಹೋಗಿರುವುದು ಗೊತ್ತಾಗಿದೆ. ಇಲಕಲ್ನ ದರ್ಗಾ ಹತ್ತಿರ ಅಲೆಯುತ್ತಾ, ಬೀದಿಯಲ್ಲಿಯೇ ವಾಸ ಮಾಡುತ್ತಿದ್ದ ಅಜ್ಜಿಯನ್ನು, ಇಳಕಲ್ ನಗರದ ಯುವಕರು ಇಬ್ರಾಹಿಂ ಭಾಗವಾನ್ ಹಾಗೂ ರಫೀಕ್ ಸೈಯದ್ ಹಾಗೂ ಹಸನ್ ಇವರು ನೋಡಿ ಸಮಾಜ ಸೇವಕಿ ಶ್ರೀಮತಿ ಜಯಶ್ರೀ ಸಾಲಿಮಠ ಅವರು ತಮ್ಮ ಮಗಳನ್ನು ಕಳುಹಿಸಿಕೊಟ್ಟು ಅಜ್ಜಿಯ ಬಗ್ಗೆ ವಿಚಾರಿಸಿದ್ದಾರೆ.
ಆದರೆ ವೃದ್ಧೆಯನ್ನು ಮನೆಯವರೇ ಬಿಟ್ಟು ಹೋಗಿದ್ದಾರೆಂದು ತಿಳಿದು ಅವರ ಹುಡುಕಾಟದಲ್ಲಿ ತೊಡಗುತ್ತಾರೆ. ಅಲ್ಲದೆ ವಿಳಾಸ ಸಿಗೋವರೆಗೂ ಜಯಶ್ರೀ ಸಾಲಿಮಠ ಅವರು, ತಮ್ಮ ಮನೆಯಲ್ಲಿ ಅಜ್ಜಿಗೆ, ಲಾಲನೆ-ಪಾಲನೆ ಮಾಡಿ, ಉಪಚಾರ ಮಾಡಿದ್ದಾರೆ. ನಂತರ ಅಜ್ಜಿಯ ಊರು ಕೊಪ್ಪಳ ಜಿಲ್ಲೆಯ ತಾವರಗೆರೆ ಎಂಬ ಮಾಹಿತಿ ತಿಳಿದು, ಅಜ್ಜಿಯ ಪುತ್ರ ಹಾಗೂ ಮೊಮ್ಮಕ್ಕಳನ್ನು ಕರೆಯಿಸಿದ್ದಾರೆ.
ಸರಿಯಾಗಿ ನೋಡಿಕೊಳ್ಳದೆ ಬೀದಿಯಲ್ಲಿ ಬಿಟ್ಟಿರುವುದರಿಂದ ಬುದ್ದಿ ಮಾತು ಹೇಳಿದ್ದಾರೆ. ತಂದೆ-ತಾಯಿಗಳಿಗೆ ನೋಡಿಕೊಳ್ಳಿ ಎಂದು ತಿಳಿ ಹೇಳಿ ಜಯಶ್ರೀ ಸಾಲಿಮಠ ಅವರು ತಮ್ಮ ಸ್ವಂತ ವೆಚ್ಚದಲ್ಲಿ ವಾಹನದ ಮೂಲಕ ಊರಿಗೆ ಅವರ ಪುತ್ರ ಹಾಗೂ ಮೊಮ್ಮಕ್ಕಳಿಗೆ ಜೊತೆಗೆ ಕಳಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.