ಬಾಗಲಕೋಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಕ್ಕಳ ಸಹಾಯವಾಣಿ- 1098, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಪೊಲೀಸ್ ಇಲಾಖೆ, ರೀಚ್ ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೆವಾರ್ಡ್ ಸಂಸ್ಥೆ ವತಿಯಿಂದ ಆಯೋಜಿಸಲಾದ 'ಮಕ್ಕಳ ಸಹಾಯವಾಣಿ ಸ್ನೇಹಿ ಸಪ್ತಾಹ' ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಅವರು ಚಾಲನೆ ನೀಡಿದರು.
ಮಕ್ಕಳ ಸಹಾಯವಾಣಿ ಬಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, 'ಮಕ್ಕಳ ಸಹಾಯವಾಣಿ ಸ್ನೇಹಿ ಸಪ್ತಾಹ'ದ ಉದ್ದೇಶ 1098 ಸಂಖ್ಯೆಯ ಬಗ್ಗೆ ತಿಳವಳಿಕೆ ಮೂಡಿಸುವುದು. ಸಂಕಷ್ಟದಲ್ಲಿರುವ ಮಕ್ಕಳಿಗೆ ಸ್ಪಂದಿಸಲು 1098 ಸಂಖ್ಯೆ ನೆರವಾಗಲಿದೆ. ಪೊಲೀಸ್ ಇಲಾಖೆ ಸಹಾಯವಾಣಿಗೆ ಅಗತ್ಯವಾದ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರು ಮಾತನಾಡಿ, ಪ್ರಚಾರದ ಬಿತ್ತಿ ಪತ್ರಗಳು ಬಿಡುಗಡೆ ಮಾಡಿದರೆ ಜವಾಬ್ದಾರಿ ಮುಗಿಯುವುದಿಲ್ಲ. ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಅಭಿಯಾನದ ಉದ್ದೇಶ ಸಫಲವಾಗುತ್ತದೆ. ಮಕ್ಕಳಿಗೆ ಏನಾದರು ಸಮಸ್ಯೆ ಬಂದರೆ ಕೂಡಲೇ 1098 ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು. ಇದು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಹಕಾರಿಯಾಗಿದೆ. ಬಾಲ್ಯ ವಿವಾಹದಲ್ಲಿ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು, ಅದನ್ನು ಶೂನ್ಯಕ್ಕೆ ತರಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದರು.
ಜಿಲ್ಲಾ ಮಕ್ಕಳ ಸಮಿತಿಯ ಅಧ್ಯಕ್ಷ ಗುಲಾಬ್ ನದಾಫ್ ಅವರು 'ಬಾಲ್ಯ ವಿವಾಹ ನಿಷೇಧ' ಜಾಗೃತಿಯ ಬಿತ್ತಿ ಪತ್ರ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಪಿ.ಎಸ್. ಚವ್ಹಾಣ್, ಡಿವೈಎಸ್‍ಪಿ ರವೀಂದ್ರ ಶಿರೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ವೈ ಉಕ್ಕಲಿ ಭಾಗವಹಿಸಿದ್ದರು.