ಬಾಗಲಕೋಟೆ: ಜಾತಿ ಗಣತಿ ವರದಿ ಇನ್ನೂ ಬಿಡುಗಡೆಯೇ ಆಗಿಲ್ಲ. ಅದರೆ ವರದಿ ಕುರಿತು ವಿನಾಕಾರಣ ಚರ್ಚೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಗೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.
ಜಾತಿ ಗಣತಿ ವರದಿಯಿಂದಾಗಿ ಸಿದ್ದರಾಮಯ್ಯ ಅವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ಸಿಎಂ ಗರಂ ಆದರು. 'ಮಾಜಿ ಸಿಎಂ ಕುಮಾರಸ್ವಾಮಿ ಅವರು ಜಾತಿ ಗಣತಿ ವರದಿ ಬಗ್ಗೆ ಅಧ್ಯಯನ ಮಾಡಿದ್ದಾರೆಯೇ, ಅವರಿಗೆ ಜಾತಿ ಗಣತಿ ವರದಿ ಬಗ್ಗೆ ಏನಾದರೂ ಗೊತ್ತಿದೆಯಾ?' ಎಂದು ಪ್ರಶ್ನಿಸಿದರು. 'ವರದಿ ಹಾಗೆ ಇದೆ, ಹೀಗೆ ಇದೆ ಎಂಬ ಊಹೆಗಳು ಒಳ್ಳೆಯ ಬೆಳವಣಿಗೆ ಅಲ್ಲ. ಯಾವುದೇ ಮಾಹಿತಿ ಇಲ್ಲದೆ ವಿನಾಕಾರಣ ರಾಜಕೀಯ ಮಾಡುವುದಕ್ಕಾಗಿ ಇಂತಹ ಮಾತುಗಳನ್ನು ಹೇಳುವುದು ಸರಿಯಲ್ಲ' ಎಂದರು.
ವರದಿಯ ಮೂಲ ಪ್ರತಿ ಕಳೆದುಹೋಗಿದೆ ಎಂಬ ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರ ಹೇಳಿಕೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, 'ಈ ಬಗ್ಗೆ ನನಗೆ ಗೊತ್ತಿಲ್ಲ, ಜಯಪ್ರಕಾಶ್ ಹೆಗ್ಡೆ ಅವರ ಜೊತೆ ಮಾತನಾಡುತ್ತೇನೆ' ಎಂದು ಪ್ರತಿಕ್ರಿಯಿಸಿದರು.
ಬಿಹಾರದಲ್ಲಿ ಜಾತಿಗಣತಿ ಬಿಡುಗಡೆ: ಸಿಎಂ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಜಾತಿಗಣತಿ ಬಿಡುಗಡೆ ಮಾಡಿದ್ರು, ಅವರು ಸಮಾಜ ಒಡೆದ್ರಾ?. ಸುಮ್ಮನೆ ಏನಾದರೂ ರಾಜಕೀಯವಾಗಿ ಮಾತನಾಡಲಿಕ್ಕೆ ಹೋಗಬಾರದು ಎಂದು ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬಿಜೆಪಿಯಲ್ಲಿ ಬೆಂಕಿ ಹೊತ್ತಿದೆ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಹಾಗೂ ಆರ್ ಆಶೋಕ್ ವಿರೋಧ ಪಕ್ಷ ನಾಯಕರಾದ ಬಳಿಕ ಬಿಜೆಪಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಪಕ್ಷದಲ್ಲಿ ಬಹಳ ಜನಕ್ಕೆ ಅಸಮಾಧಾನವಿದೆ. ಅದು ಏನಾಗುತ್ತದೆಯೋ ಹೇಳಲಿಕ್ಕೆ ಬರಲ್ಲ. ಅದು ಮುಂದೆ ಜ್ವಾಲೆಯಾಗುತ್ತದೆಯಾ? ಅಥವಾ ಅವರ ಬುಡಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿದೆಯಾ? ನನಗೆ ಗೊತ್ತಿಲ್ಲ. ಬೆಂಕಿ ಮಾತ್ರ ಹೊತ್ತಿಕೊಂಡಿದೆ ಎಂದು ಸಿಎಂ ಟೀಕಿಸಿದರು.
ಬಿಜೆಪಿಯವರು ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಂದ್ರೆ ಸ್ವಾಗತ: ಬಿಜೆಪಿಯಿಂದ ಯಾರಾದ್ರೂ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನಾವು ಯಾರನ್ನು ಕಾಂಗ್ರೆಸ್ಗೆ ಕರೆಯಲ್ಲ. ಅವರಾಗೇ ಬಂದ್ರೆ ಸೇರಿಸಿಕೊಳ್ಳುತ್ತೇವೆ. ನಮ್ಮ ಕಾಂಗ್ರೆಸ್ ಸಿದ್ಧಾಂತ, ನಮ್ಮ ನಾಯಕತ್ವ ಒಪ್ಪಿ ಬಂದ್ರೆ ಸೇರಿಸಿಕೊಳ್ಳುತ್ತೇವೆ. ನನ್ನ ರಾಜಕೀಯ ಜೀವನದಲ್ಲಿ ಯಾರನ್ನೂ ನಮ್ಮ ಪಕ್ಷಕ್ಕೆ ಬನ್ನಿ ಎಂದೂ ಕರೆದಿಲ್ಲ. ನಮ್ಮ ತತ್ವ ಸಿದ್ಧಾಂತ ಮೆಚ್ಚಿ ಬಿಜೆಪಿಯಿಂದ ಬರುವವರು ಕಾಂಗ್ರೆಸ್ಗೆ ಬರಬಹುದು ಎಂದು ತಿಳಿಸಿದರು.
ಇದನ್ನೂ ಓದಿ:ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ, ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ: ಬಿ ಎಸ್ ಯಡಿಯೂರಪ್ಪ