ಬಾಗಲಕೋಟೆ: ಸಾಧನೆ ಮಾಡಬೇಕು ಎಂಬ ಛಲವೊಂದಿದ್ದರೆ ಸಾಕು, ಬಡತನ, ಎಲ್ಲಾ ಕಠಿಣ ಪರಿಸ್ಥಿತಿಗಳನ್ನ ದಾಟಿ ಜಯ ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯ ರಬಕವಿ - ಬನಹಟ್ಟಿ ಪಟ್ಟಣದ ಬಡ ನೇಕಾರರ ಕುಟುಂಬದ ಯುವಕ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ. ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಕುಟುಂಬಕ್ಕೆ ಇದೀಗ ಶುಕ್ರದೆಸೆ ಬಂದಿದೆ.
ಹೌದು, ಬಾಗಲಕೋಟೆಯ ರಬಕವಿ - ಬನಹಟ್ಟಿ ತಾಲೂಕಿನ ರಬಕವಿಯ ಅಣ್ಣಪ್ಪ ಚಾಪೀ ಎಂಬುವರ ಮಗ ಗುರು, ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್ ( ಎಸ್ಎಸ್ಐಆರ್ ) ನಿಂದ ವಾರ್ಷಿಕ 21.35 ಲಕ್ಷ ರೂಪಾಯಿಯ ಕ್ಯಾಂಪಸ್ ಪ್ಲೇಸ್ಮೆಂಟ್ ಆಫರ್ ಪಡೆದಿದ್ದು ದಾಖಲೆ ಮಾಡಿದ್ದಾರೆ.
ವಿದ್ಯಾರ್ಥಿ ಗುರು ಚಾಪೀ ಬೆಳಗಾವಿಯ ಕೆಎಲ್ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಯಾಗಿದ್ದು, ಕಳೆದ 43 ವರ್ಷಗಳಲ್ಲಿ ಕಾಲೇಜಿನ ಜಿಐಟಿಯ ವಿದ್ಯಾರ್ಥಿ ಪಡೆದ ಅತ್ಯಧಿಕ ಕ್ಯಾಂಪಸ್ ಉದ್ಯೋಗದ ಕೊಡುಗೆಯಾಗಿದೆ.
ಪ್ರತಿಭಾವಂತ ವಿದ್ಯಾರ್ಥಿ ಗುರು ಚಾಪೀ ಸಾಧನೆಗೆ ಕುಟುಂಬ, ನೇಕಾರ ಸಮುದಾಯ ಹಾಗೂ ಕುರುಹಿನಶೆಟ್ಟಿ ಸಮಾಜ ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಯ ಮನೆಯಲ್ಲಿ ಸಂತಸ ಮುಗಿಲು ಮುಟ್ಟಿತ್ತು.
ತನ್ನ ಸಾಧನೆ ಕುರಿತು ಮಾತನಾಡಿದ ಗುರು ಚಾಪೀ, ಕಿತ್ತು ತಿನ್ನುವ ಬಡತನದಲ್ಲಿ ಗುರಿ ಸಾಧಿಸಲು ಹಾಗು ಹಿಡಿದ ಛಲಕ್ಕೆ ಸರ್ಕಾರದ ಸ್ಕಾಲರ್ ಶಿಪ್ ಹಾಗೂ ಶಿಕ್ಷಣ ಸಾಲವೇ ಸಹಕಾರಿಯಾಗಿ ಈ ಮಟ್ಟಕ್ಕೆ ಬೆಳೆಯುವಲ್ಲಿ ಕಾರಣವಾಗಿದೆ. ವಿದ್ಯಾರ್ಥಿಗಳು ಸಾಧನೆ ಮಾಡಲು ಸ್ವತಂತ್ರರು. ಅವರು ಏನನ್ನೂ ಕಲಿಯಲೆತ್ನಿಸುವರೋ ಅದಕ್ಕೆ ಪೋಷಕರು ಸಹಕಾರ ನೀಡಬೇಕು ಎಂದರು.
ನೇಕಾರ ಮಾಲೀಕರ ನೆರವು: ಬಿ.ಇ. ಪ್ರವೇಶಾತಿ ಪಡೆಯುವ ಸಂದರ್ಭ ಒಟ್ಟು ನಾಲ್ಕೆದು ಲಕ್ಷ ರೂ.ಗಳ ವೆಚ್ಚವಾಗುವುದರಿಂದ ನೇಕಾರಿಕೆ ಮಾಡುತ್ತಿದ್ದ ವಿದ್ಯಾರ್ಥಿಯ ತಂದೆ ಅಣ್ಣಪ್ಪ ಚಾಪೀಗೆ ಜವಳಿ ಉದ್ಯಮಿ ಚಿದಾನಂದ ಬೆಳಗಲಿ ಆರ್ಥಿಕ ನೆರವು ನೀಡಿದರೆಂದು ವಿದ್ಯಾರ್ಥಿ ಮನದಾಳದಿಂದ ಹೇಳಿದರು.
ಇದನ್ನೂ ಓದಿ: ನಾರಿ ಶಕ್ತಿ ಸಾಬೀತುಪಡಿಸಿದ ಕಾಸರಗೋಡು ಯುವತಿ: ಬೈಕ್ನಲ್ಲಿ ದೇಶ-ವಿದೇಶ ಸುತ್ತಿ ಬಂದ್ರು ಅಮೃತಾ ಜೋಷಿ