ಬಾಗಲಕೋಟೆ : ಇಬ್ಬರಿಗೆ ನ್ಯಾಯ ಮೂರನೇಯವರಿಗೆ ಲಾಭ ಎಂಬಂತೆ ಬಾದಾಮಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಟಿಕೆಟ್ ಘೋಷಣೆ ಮಾಡಲಾಗಿದ್ದು, ಪಕ್ಷದಲ್ಲಿ ಬಂಡಾಯದ ಬಿಸಿ ಏರುತ್ತಿದೆ. ಈಗಾಗಲೇ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಶಾಂತಗೌಡ ಪಾಟೀಲ ಅವರನ್ನು ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಆಕಾಂಕ್ಷಿ ಅಭ್ಯರ್ಥಿಗಳಾಗಿದ್ದ ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ ಹಾಗೂ ಮಹಾಂತೇಶ ಮಮದಾಪೂರ ಅವರು ಇಂದು ಬೆಂಬಲಿಗರ ಸಭೆ ನಡೆಸಿ, ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಬಂಡಾಯದ ಬಾವುಟ ಹಾರಿಸುವ ಬಗ್ಗೆ ಸೂಚನೆ ನೀಡಿದ್ದಾರೆ.
ಮುಖಂಡರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ- ಪಟ್ಟಣಶೆಟ್ಟಿ: ಬಾದಾಮಿ ಮತಕ್ಷೇತ್ರಕ್ಕೆ ಬೇರೆಯವರಿಗೆ ಟಿಕೆಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ರಾಮಕೃಷ್ಣ ಹೆಗೆಡೆ ಅವರ ಜನಶಕ್ತಿ ಪಕ್ಷದಿಂದಲೂ ರಾಜಕೀಯ ಮಾಡಿಕೊಂಡು ಕ್ಷೇತ್ರದ ಜನತೆ ಅಭಿವೃದ್ಧಿಗಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇಂತಹ ರಾಜಕೀಯ ಅನುಭವ ಹೊಂದಿರುವ ತಮಗೇ ಈ ಬಾರಿ ಇಲ್ಲಿ ಟಿಕೆಟ್ ಸಿಗುತ್ತೆ ಎಂದು ಪಕ್ಷದ ಹಿರಿಯ ಮುಖಂಡರು ಭರವಸೆ ನೀಡಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಬದಲಾವಣೆ ಆಗಿರುವುದು ಆಶ್ಚರ್ಯವಾಗಿದೆ. ಮುಖಂಡರ ಜೊತೆಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಟ್ಟಣಶೆಟ್ಟಿ ಇದೇ ವೇಳೆ ತಿಳಿಸಿದ್ದಾರೆ.
ಟಿಕೆಟ್ ನೀಡದೆ ಮತ್ತೆ ವಂಚನೆ ಆಗಿದೆ ಎಂದ ಮಮದಾಪೂರ: ಇನ್ನು ಟಿಕೆಟ್ ಸಿಗದಿರುವುದಕ್ಕೆ ಇನ್ನೊಬ್ಬ ಅಭ್ಯರ್ಥಿ ಮಹಾಂತೇಶ ಮಮದಾಪೂರ ಸಹ ಆಕ್ರೋಶ ಹೊರ ಹಾಕಿದ್ದಾರೆ. ಟಿಕೆಟ್ ಸಿಗದಿರುವ ಬಗ್ಗೆ ಮಾತನಾಡಿರುವ ಅವರು, ’’ಜೆಡಿಎಸ್ ಪಕ್ಷದಲ್ಲಿ ಇದ್ದ ನನ್ನನ್ನು ಕಳೆದ ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆಯಿಂದಾಗಿ ಮತ್ತೆ ಮರಳಿ ಪಕ್ಷಕ್ಕೆ ಕರೆದುಕೊಂಡು ಬರಲಾಗಿದೆ. ಈಗ ಟಿಕೆಟ್ ನೀಡದೆ ಮತ್ತೆ ವಂಚನೆ ಆಗಿದೆ. ಈ ಬಗ್ಗೆ ಹೈಕಮಾಂಡ್ ಪುನರ್ ಪರಿಶೀಲನೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಅಭಿಮಾನಿಗಳ ಜೊತೆಗೆ ಚರ್ಚೆ ಮಾಡಿ, ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೈ ಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಭಾರಿ ಬಾದಾಮಿ ಮತಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಮಾತ್ರ ಖಚಿತವಾಗಿದೆ.
ಶಾಂತಗೌಡ ಪಾಟೀಲ್ ಹೆಸರು ಘೋಷಣೆ: ವಿಶೇಷ ಎಂದರೆ ಬದಾಮಿ ಮತ ಕ್ಷೇತ್ರದಲ್ಲಿ ಅಳಿಯ ಹಾಗೂ ಮಾವನ ಮಧ್ಯೆ ಟಿಕೆಟ್ಗಾಗಿ ಸಂಘರ್ಷ ಏರ್ಪಡುತ್ತಿತ್ತು. ಈ ತಿಕ್ಕಾಟದಿಂದಾಗಿ ಮೂರನೇಯದವರಿಗೆ ಲಾಭ ಆಗುತ್ತಿತ್ತು ಎಂಬ ಮಾತಿತ್ತು. ಇದನ್ನು ತಪ್ಪಿಸಲು ಮೂರನೇಯ ವ್ಯಕ್ತಿ ಶಾಂತಗೌಡ ಪಾಟೀಲ ಅವರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಿದೆ ಎಂದು ಕ್ಷೇತ್ರದಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಶಾಂತಗೌಡ ಈಗಾಗಲೇ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಹೆಸರು ವಾಸಿ ಆಗಿರುವ ಜೊತೆಗೆ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಜನರ ಮಧ್ಯೆ ಇದ್ದು, ಕಾರ್ಯಕರ್ತರ ಸಂಪರ್ಕ ಬೆಳೆಸಿಕೊಂಡು ಬಂದಿದ್ದಾರೆ. ಶಾಂತಗೌಡ ಪಾಟೀಲ ಅಭ್ಯರ್ಥಿ ಆದಲ್ಲಿ ಮಾತ್ರ ತೀವ್ರ ಪೈಪೋಟಿ ನೀಡುತ್ತಾರೆ ಎಂಬ ಮಾಹಿತಿಯನ್ನು ಪಡೆದುಕೊಂಡ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ ಎಂದು ತಿಳಿದು ಬಂದಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರವನ್ನು ತೊರೆದು ಮೂಲ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಉಳಿದಿಲ್ಲ. ಹೀಗಾಗಿಯೇ ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ ಹಾಗೂ ಮಹಾಂತೇಶ ಮಮದಾಪೂರ ಪ್ರಬಲ ಆಕಾಂಕ್ಷಿಯಾಗಿದ್ದರು. ಇದರ ಮಧ್ಯೆ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದ ಎಸ್ ಟಿ ಪಾಟೀಲ ಸಹ ಆಕಾಂಕ್ಷಿಯಾಗಿದ್ದರು. ಅಳಿಯ ಮಾವನನ್ನು ತಪ್ಪಿಸಿ, ಈ ಭಾರಿ ಹೊಸ ಮುಖಕ್ಕೆ ಅವಕಾಶ ನೀಡಲಾಗಿದೆ. ಹಿಂದಿನ ಚುನಾವಣೆಯಲ್ಲಿ ಎಂ ಕೆ ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ನೀಡಿದಾಗ ಮಹಾಂತೇಶ ಮಮದಾಪೂರ ವಿರೋಧ ಮಾಡಿದ್ದರು. ಮಹಾಂತೇಶ ಮಮದಾಪೂರ ಅವರಿಗೆ ನೀಡಿದಾಗ ಎಂ ಕೆ ಪಟ್ಟಣಶೆಟ್ಟಿ ವಿರೋಧ ಮಾಡಿದ್ದರು.
ಇದನ್ನೂ ಓದಿ: ರಾಣೆಬೆನ್ನೂರು ವಿಧಾನಾಸಭೆ ಕ್ಷೇತ್ರ ಬಿಜೆಪಿ ಟಿಕೆಟ್ ಘೋಷಣೆ.. ಆರ್ ಶಂಕರ್ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ?