ಬಾಗಲಕೋಟೆ: ಸದಾ ರಸ್ತೆಯಲ್ಲಿ ಮಲುಗುತ್ತಿದ್ದ, ಜನಸಂಚಾರಕ್ಕೆ ತೊಂದರೆ ಮಾಡಿ ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದ ಬಿಡಾಡಿ ದನಗಳನ್ನು ನಗರಸಭೆಯಿಂದ ಬಾದಾಮಿ ತಾಲೂಕಿನ ಗೋಶಾಲೆಗೆ ಇಂದು ಕಳುಹಿಸಲಾಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ಸುಮಾರು ಎಂಟತ್ತು ಬಿಡಾಡಿ ದನಗಳು ರಸ್ತೆಯ ಮಧ್ಯೆಯೇ ಮಲಗುತ್ತಿದ್ದವು. ಇಲ್ಲಿ ಜನದಟ್ಟಣೆ ಮತ್ತು ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಸಂಚಾರಕ್ಕೆ ಅಡೆತಡೆ ಮಾಡುತ್ತಿದ್ದವು. ಇನ್ನು ವೇಗವಾಗಿ ಹೋಗುವ ವಾಹನಗಳಿಗೆ ಬಿಡಾಡಿ ದನಗಳಿಂದ ಅಪಘಾತವಾದ ಘಟನೆಗಳು ಇಲ್ಲಿ ನಡೆದಿವೆ. ನಗರದಲ್ಲಿ ಸುಮಾರು 25ಕ್ಕೂ ಹೆಚ್ಚು ಬಿಡಾಡಿ ದನಗಳನ್ನು ನಗರಸಭೆಯು ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಶಿವಯೋಗಮಂದಿರದ ಗೋಶಾಲೆಗೆ ರವಾನಿಸಿದೆ.
ದನಗಳಿಗೆ ಯಾವುದೇ ತೊಂದರೆಯಾಗದಂತೆ ಹಗ್ಗದಿಂದ ಕಟ್ಟಿ ನಂತರ ಲಾರಿ ಮೂಲಕ ಸುರಕ್ಷಿತವಾಗಿ ಗೋಶಾಲೆಗೆ ನಗರಸಭೆ ಸಿಬ್ಬಂದಿ ರವಾನಿಸಿದ್ದಾರೆ. ಈಗ ಬಿಡಾಡಿ ದನಗಳು ಗೋಶಾಲೆಗೆ ಹೋಗುತ್ತಿದ್ದಂತೆ ಬಸವೇಶ್ವರ ವೃತ್ತದಲ್ಲಿ ನಿಲ್ಲುವ ಪೊಲೀಸ್ ಸಿಬ್ಬಂದಿ ಹಾಗೂ ತರಕಾರಿ ವ್ಯಾಪಾರಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.