ಬಾಗಲಕೋಟೆ: ಮಹಾಲಿಂಗಪುರ ಸಮೀಪದ ನಂದಗಾಂವ ಗ್ರಾಮದ ರೈತ ಸಂಗಪ್ಪ ಭೀಮಪ್ಪ ಮುಗಳಖೋಡ ಅವರ ಜೋಡೆತ್ತುಗಳು 17 ಲಕ್ಷ ರೂ.ಗಳಿಗೆ ಮಾರಾಟವಾಗಿ ಈ ಭಾಗದ ಜನತೆಯ ಗಮನ ಸೆಳೆದಿವೆ.
ಈ ಜೋಡೆತ್ತುಗಳನ್ನು 2018 ರಲ್ಲಿ ಅಕ್ಕಿಮರಡಿಯ ರೈತ ಮಲ್ಲಪ್ಪ ಬೋರಡ್ಡಿ ಅವರಿಂದ 8 ಲಕ್ಷ ರೂ.ಗಳಿಗೆ ಖರೀದಿಸಿದ ಸಂಗಪ್ಪ ಬಹು ಪ್ರೀತಿಯಿಂದ ಮತ್ತು ಜೋಕೆಯಿಂದ ನೋಡಿಕೊಂಡಿದ್ದರು. ಮಾಲೀಕನ ಈ ಪ್ರೀತಿಯ ಮುಂದೆ ನಾವೇನು ಕಡಿಮೆ ಇಲ್ಲವೆಂಬಂತೆ, ಸುಮಾರು 50ಕ್ಕೂ ಹೆಚ್ಚು ಕಡೆ ತೆರೆಬಂಡೆ ಮತ್ತು ಇತರ ಸುಮಾರು 48 ಸ್ಪರ್ಧೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆದುಕೊಂಡು 9 ಲಕ್ಷ ರೂ.ಗಳಷ್ಟು ಆದಾಯ ತಂದುಕೊಟ್ಟವು.
ಮೊದಲ ಮಾಲೀಕನಿಗೆ ಮಾರಾಟ:
ನಂದಗಾಂವ ಗ್ರಾಮದ ರೈತ ಸಂಗಪ್ಪ ಈ ಎತ್ತುಗಳನ್ನು ಅಕ್ಕಿಮರಡಿ ಗ್ರಾಮದ ರೈತ ಮಲ್ಲಪ್ಪ ಬೊರಡ್ಡಿ ಅವರಿಂದ ಖರೀದಿಸಿದ್ದು, ವಾಪಸ್ ಅವರಿಗೇ ಮಾರಿದ್ದಾರೆ. ಮಲ್ಲಪ್ಪ ಅವರಿಗೆ ರೂ.17 ಲಕ್ಷಕ್ಕೆ ಮಾರುವ ಮುಂಚೆ ಇನ್ನೊಬ್ಬ ರೈತ 16 ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟಿದ್ದ ಅದಕ್ಕೆ ನಾನು ಒಪ್ಪಲಿಲ್ಲ. ಮಲ್ಲಪ್ಪ ಅವರಿಗೂ ನನಗೂ ಮೊದಲೇ ಈ ಎತ್ತುಗಳ ವ್ಯವಹಾರ ಇದ್ದದ್ದರಿಂದ ಅವರಿಗೆ ಮಾರುವುದು ಖುಷಿ ನೀಡುವ ವಿಚಾರ ಎನ್ನುತ್ತಾರೆ ಎತ್ತುಗಳ ಮಾಲೀಕ ಸಂಗಪ್ಪ.
ಈ ಭಾಗದ ಸಾಮಾಜಿಕ ಜಾಲತಾಣಗಳಲ್ಲಿ ಎತ್ತುಗಳ ಚಿತ್ರಗಳು ಹರಿದಾಡುತ್ತಿದ್ದು, ಸಂಗಪ್ಪ ಅವರಿಗೆ ಧನ ಲಾಭ ಮಾತ್ರವಲ್ಲದೆ ಅವರ ಪಾಲಿಗೆ ಕಾಮಧೇನುವಿನಂತೆ ಕೆಲಸ ಮಾಡಿವೆ. ಈ ಎರಡೂ ಎತ್ತುಗಳಿಗೆ ರಾಮ-ಲಕ್ಷ್ಮಣ ಎಂದು ನಾಮಕರಣ ಮಾಡಿ ಮನೆಯ ಮಕ್ಕಳಂತೆ ಸಲುಹಿದ್ದೇನೆ. ಈಗ ಮನೆ ಕಟ್ಟಿಸುತ್ತಿದ್ದು, ಹಣದ ಅವಶ್ಯಕತೆ ಇರುವುದರಿಂದ ಅವುಗಳನ್ನು ಮೂಲ ಮಾಲೀಕನಿಗೆ ಮಾರಾಟ ಮಾಡಿದ್ದೇನೆಂದು ಸಂಗಪ್ಪ ಮುಗಳಖೋಡ ನಂದಗಾಂವ ತಿಳಿಸಿದ್ದಾರೆ.
ಎತ್ತುಗಳ ಮೆರವಣಿಗೆ:
ಹೊಲದಲ್ಲಿ ಉಳುಮೆ ಮಾಡಿದ್ದಲ್ಲದೆ ಲಾಭವನ್ನೂ ತಂದ ಈ ಎತ್ತುಗಳನ್ನು ನಂದಗಾಂವ ಗ್ರಾಮದಲ್ಲಿ ಮೆರವಣಿಗೆ ಮಾಡಿ, ವಿಡಿಯೋ ಸಾಂಗ್ ಮಾಡಿ ಅವುಗಳನ್ನು ಶಾಶ್ವತವಾಗಿ ಜನಮನದಲ್ಲಿರುವಂತೆ ಮಾಡುತ್ತೇವೆ ಎನ್ನುತ್ತಾರೆ ಸಂಗಪ್ಪ ಮುಗಳಖೊಡ.