ಬಾಗಲಕೋಟೆ: ಆಶಾ ಕಾರ್ಯಕರ್ತೆಯರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ಆಯುರ್ವೇದ ಔಷಧ ಚವನ ಪ್ರಾಶ್ ಅನ್ನು ಜಿಲ್ಲಾ ಪಂಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ ಶುಕ್ರವಾರ ವಿತರಿಸಿದರು.
ಬಳಿಕ ಮಾತನಾಡಿದ ಅವರು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಚವನ ಪ್ರಾಶ್ ಅನ್ನು ನಿತ್ಯ ಎರಡು ಹೊತ್ತು ತೆಗೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹೊರಗಡೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಾಗ ಸಾಬೂನು ಅಥವಾ ಸ್ಯಾನಿಟೈಸರ್ನಿಂದ ಕೈತೊಳೆದುಕೊಳ್ಳಬೇಕು. ಆಯುಷ್ ಪದ್ಧತಿಯಲ್ಲಿ ಹೇಳಿದ ಕಷಾಯವನ್ನು ಕುಡಿಯಬೇಕು ಎಂದು ತಿಳಿಸಿದರು.
ಕೋವಿಡ್-19 ನಿಯಂತ್ರಣ ಕಾರ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಚವನ ಪ್ರಾಶ ವಿತರಿಸುವಂತೆ ಬೆಂಗಳೂರಿನ ಆಯುಷ್ ಆಯುಕ್ತರಿಗೆ ತಿಳಿಸಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಚವನ ಪ್ರಾಶ್ ವಿತರಿಸಲು ಔಷಧ ಕಳುಹಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಲ್ಲಣ್ಣ ತೋಟದ ಮಾತನಾಡಿ, ಪುರಾತನ ಕಾಲದಿಂದಲೂ ಚವನ ಮಹರ್ಷಿಗಳಿಂದ ತಯಾರಿಸಲ್ಪಟ್ಟ ಆರೋಗ್ಯ ವೃದ್ಧಿಸುವ ಔಷಧವಾಗಿದೆ. ಶ್ವಾಸಕೋಶಗಳಿಂದ ಉತ್ಪತ್ತಿಯಾಗುವ ಖಾಯಿಲೆಗಳಿಗೆ ಉತ್ತಮ ಔಷಧ. ಕೋವಿಡ್-19ನಲ್ಲಿ ಕಂಡು ಜ್ವರ, ಕೆಮ್ಮು, ನೆಗಡಿಯನ್ನು ತಡೆಯುವ ಶಕ್ತಿ ಈ ಔಷಧ ಹೊಂದಿದೆ. ಆಮಲಕಿ, ಅಶ್ವಗಂಧ, ಗುಡೂಚಿ, ಬಲಾ ಸೇರಿ ಒಟ್ಟು 43 ಜೀವನೀಯ ದ್ರವ್ಯಗಳನ್ನು ಹೊಂದಿದೆ. ಇದನ್ನು ನಿಯಮಿತವಾಗಿ ಹಾಲಿನಲ್ಲಿ ಸೇವಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್. ದೇಸಾಯಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಬಿ.ಜಿ. ಹುಬ್ಬಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ. ಪಟ್ಟಣಶೆಟ್ಟಿ, ಜಿಲ್ಲಾ ಆಯುಷ್ ಇಲಾಖೆಯ ಹಿರಿಯ ವೈದ್ಯರಾದ ಡಾ. ಚಂದ್ರಕಾಂತ. ರಕ್ಕಸಗಿ, ಡಾ.ಎಸ್.ಪಿ.ನಿಡಗುಂದಿ, ಡಾ.ಸಂಗೀತಾ ಬಳಗಾನೂರ, ಆಯುಷ್ ಇಲಾಖೆಯ ಅಧಿಕ್ಷಕಿ ಡಾ. ಪ್ರತಿಭಾ ಅರ್ಕ ಸಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.