ಬಾಗಲಕೋಟೆ: ಜನವರಿ 17 ರಂದು ಕೇಂದ್ರ ಗೃಹ ಸಚಿವರು ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡರಾದ ಅಮಿತಾ ಶಾ ಜಿಲ್ಲೆಯ ನಿರಾಣಿ ಶುಗರ್ಸ್ನ ನೂತನ ಕಾರ್ಖಾನೆಗೆ ಚಾಲನೆ ನೀಡಲು ಬರುತ್ತಿದ್ದಾರೆ.
ಮುರಗೇಶ ನಿರಾಣಿ ಒಡೆತನ ಸಕ್ಕರೆ ಕಾರ್ಖಾನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುತ್ತಿರುವುದರಿಂದ ಈಗ ರಾಜಕೀಯ ವರ್ಚಸ್ಸು ಬೆಳೆಸಿಕೊಳ್ಳುವುದಕ್ಕೆ ನಿರಾಣಿಯವರು ತಂತ್ರ ರೂಪಿಸುತ್ತಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ. ಅಮಿತಾ ಶಾ ಅವರನ್ನು ನಿರಾಣಿಯವರು ತಮ್ಮ ಕಾರ್ಯಕ್ರಮಕ್ಕೆ ಕರೆಸಿಕೊಳ್ಳುತ್ತಿರುವುದು ಇತರೆ ವಿಜೆಪಿ ಮುಖಂಡರಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡಲಿಕ್ಕಾ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.
ಸಚಿವ ಸಂಪುಟದ ವಿಸ್ತರಣೆ ವಿಷಯ ಬಂದಾಗ ಈ ಹಿಂದೆ ಮುರಗೇಶ ನಿರಾಣಿ ಅವರ ಹೆಸರು ಕೇಳಿ ಬಂದಿರಲಿಲ್ಲ. ಈಗ ಏಕಾಏಕಿ ಅವರ ಹೆಸರು ಮುಂಚೂಣಿಯಲ್ಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನವರ ಜೊತೆಗೆ ನಿರಾಣಿ ಅವರ ಸಂಬಂಧ ಮೊದಲು ಚನ್ನಾಗಿಯೇ ಇತ್ತು.ಇಬ್ಬರು ಸೇರಿ ಮುಧೋಳ ತಾಲೂಕಿನ ಸುತ್ತಮುತ್ತಲ ಸಕ್ಕರೆ ಹಾಗೂ ಸಿಮೆಂಟ್ ಕಾರ್ಖಾನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇತ್ತು.ಆದರೆ ಇಬ್ಬರ ನಡುವೆ ವಿರಸ ಬಂದ ಕಾರಣ ಪಾಲುದಾರಿಕೆ ಬಂಡವಾಳ ಹಿಂದಕ್ಕೆ ಪಡೆಯಲಾಗಿತ್ತು ಎಂದು ತಿಳಿದುಬಂದಿತ್ತು.ಇದರ ಜೊತೆಗೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಪಂಚಮಸಾಲಿ ಜನಾಂಗದ ಸಮಾವೇಶ ಸಮಯದಲ್ಲಿ ಸ್ವಾಮೀಜಿಯವರು, ಮುರಗೇಶ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿಕೆ ನೀಡಿದ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಬಹಿರಂಗವಾಗಿ ಅಸಮಾಧಾನ ಹೂರ ಹಾಕಿದ್ದು ಎಲ್ಲರಿಗೂ ತಿಳಿದ ವಿಷಯ. ಅಂದಿನಿಂದ ಮುರಗೇಶ ನಿರಾಣಿಗೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಅಷ್ಟಕ್ಕಷ್ಟೇ.
ವಿಧಾನಸಭೆ ಚುನಾವಣೆಯಲ್ಲಿ ಜಮಖಂಡಿ ಮತ ಕ್ಷೇತ್ರದಲ್ಲಿ ನಿರಾಣಿ ಅವರು ತಮ್ಮ ಸಹೋದರ ಸಂಗಮೇಶ ನಿರಾಣಿ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಸ್ಪರ್ಧೆ ಮಾಡಿಸಿ, ಬಿಜೆಪಿ ಪಕ್ಷದ ಸೋಲಿಗೆ ಕಾರಣವಾದರು. ಹಾಗೆ ಜಿಲ್ಲಾ ಪಂಚಾಯತ್ ಹಾಗೂ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಆಯ್ಕೆ ಸಮಯದಲ್ಲಿಯೂ ಬಿಜೆಪಿ ಪಕ್ಷಕ್ಕೆ ಸರಳ ರೀತಿಯಲ್ಲಿ ಅಧಿಕಾರ ಸಿಗುವಂತಿದ್ದರೂ,ಅಧಿಕಾರ ಸಿಗದೆ ಹಾಗೆ ನಿರಾಣಿಯವರು ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇತ್ತೀಚೆಗಷ್ಟೇ ಬಿಜೆಪಿ ಪಕ್ಷದಿಂದ ದೂರ ಉಳಿದಿದ್ದ ನಿರಾಣಿ ಪಕ್ಷ ಬಿಡುತ್ತಾರೆ ಎನ್ನಲಾಗುತ್ತಿತ್ತು. ಆದರೆ, ಈಗ ತಮ್ಮ ಕಾರ್ಖಾನೆಗೆ ಅಮಿತಾ ಶಾ ಅವರನ್ನು ಕರೆಯಿಸುವ ಜೊತೆಗೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.