ಬಾಗಲಕೋಟೆ: ಜಮಖಂಡಿ ಘಟಕದ ಚಾಲಕರಾದ ನಬೀದ ರಸುಲ್ ಕೆ. ಅವಟಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಬಸ್ಗೆ ಕಲ್ಲು ಎಸೆದ ಪರಿಣಾಮ ಮೃತಪಟ್ಟ ಹಿನ್ನೆಲೆ ಅವರ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ ಪರಿಹಾರಧನ ನೀಡಲಾಯಿತು.
ವಿಜಯಪುರದಿಂದ ಜಮಖಂಡಿ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಬಸ್ಸಿಗೆ ಕಲ್ಲು ಎಸೆದ ಪರಿಣಾಮ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಜಮಖಂಡಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯಿ ಜಮಖಂಡಿಯಲ್ಲಿರುವ ಮೃತಪಟ್ಟ ಚಾಲಕನ ಕುಟುಂಬದವರನ್ನು ಭೇಟಿ ಮಾಡಿ ತೀವ್ರ ಸಂತಾಪ ವ್ಯಕ್ತಪಡಿಸಿದರು. ಮೃತ ಚಾಲಕನ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು.
ಇದನ್ನೂ ಓದಿ: ಹೆಚ್ಡಿಕೆ ಹಾಗೂ ಸುರ್ಜೇವಾಲಾ ಶೀಘ್ರ ಚೇತರಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾರೈಕೆ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಉಪಸ್ಥಿತರಿದ್ದರು. ಎಸ್ಪಿ ಲೋಕೇಶ ಮಾತನಾಡಿ, ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ದೂರು ದಾಖಲಿಸಿ ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.