ಟೋಕಿಯೋ (ಜಪಾನ್): ಪ್ಯಾರಾಲಿಂಪಿಕ್ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಕನ್ನಡಿಗ ಸುಹಾಸ್ ಯಥಿರಾಜ್ ಬೆಳ್ಳಿಗೆ ಮುತ್ತಿಟ್ಟಿದ್ದಾರೆ. ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನೇರ ಸೆಟ್ಗಳಿಂದ ಜಯಗಳಿಸಿದ್ದ ಅವರು ಇಂದು ಫ್ರಾನ್ಸ್ನ ಲೂಕಾಸ್ ಮಝೂರ್ ವಿರುದ್ಧ ಫೈನಲ್ನಲ್ಲಿ ಎಡವಿದ್ದಾರೆ.
ಇಂದಿನ ಪಂದ್ಯದಲ್ಲಿ ಮೊದಲ ಸೆಟ್ ಅನ್ನು 21-15ರಿಂದ ಸುಹಾಸ್ ಗೆದ್ದುಕೊಂಡರೆ 2ನೇ ಸೆಟ್ನಲ್ಲಿ 17-21ರಿಂದ ಸೋಲು ಕಂಡರು. ಈ ಮೂಲಕ 1-1 ಸೆಟ್ಗಳ ಸಮಬಲ ಸಾಧಿಸಿ ಮೂರನೇ ಹಾಗೂ ಕೊನೆಯ ಸೆಟ್ನಲ್ಲಿ 15-21ರಿಂದ ಸೋಲೊಪ್ಪಿಕೊಂಡರು.
ಈ ಮೂಲಕ ಭಾರತಕ್ಕೆ ಕೊನೆಯ ದಿನವೂ ಪದಕ ಬಂದಿದ್ದು, ಈವರೆಗೆ ಒಟ್ಟು 18 ಪದಕಗಳನ್ನು ನಮ್ಮ ಕ್ರೀಡಾಪಟುಗಳು ಗಳಿಸಿದ್ದಾರೆ. ಪ್ಯಾರಾಲಿಂಪಿಕ್ನ ಕೊನೆಯ ದಿನವಾದ ಇಂದು ಹಲವು ಫೈನಲ್ ಪಂದ್ಯಗಳು ನಡೆಯಲಿದ್ದು, ಭಾರತ ಇನ್ನಷ್ಟು ಪದಕದ ನಿರೀಕ್ಷೆಯಲ್ಲಿದೆ.
ಪ್ರಸ್ತುತ ಸುಹಾಸ್ ಯಥಿರಾಜ್ ಅವರು ನೋಯ್ಡಾದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಹಾಸ್ ಪೂರ್ಣ ಹೆಸರು ಸುಹಾಸ್ ಲಾಲಿನಕೆರೆ ಯಥಿರಾಜ್. ಮೂಲತಃ ಹಾಸನದವರಾದ ಸುಹಾಸ್, ಪ್ಯಾರಾಲಿಂಪಿಕ್ನಲ್ಲಿ ಪದಕ ಗೆದ್ದಿರುವ ಮೊದಲ ಜಿಲ್ಲಾಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.