ಬೆಲ್ಗ್ರೇಡ್ : ಬೆಲ್ಗ್ರೇಡ್‌ನಲ್ಲಿ ಆಯೋಜಿಸಿದ್ದ 'ಆ್ಯಂಡ್ರಿಯಾ' ಪ್ರದರ್ಶನ ಟೆನಿಸ್ ಟೂರ್ನಿ ಬಳಿಕ ನಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಟೀಕೆ ಮಾಡಲಾಗಿದೆ ಎಂದು ವಿಶ್ವದ ನಂ. 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಹೇಳಿದ್ದಾರೆ.
ಕೊರೊನಾ ಪರಿಹಾರಕ್ಕೆ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಕಳೆದ ತಿಂಗಳು ಜೊಕೊವಿಕ್ ಬೆಲ್ಗ್ರೇಡ್‌ನಲ್ಲಿ 'ಅ್ಯಡ್ರಿಯಾ ಟೂರ್' ಎನ್ನುವ ಪ್ರದರ್ಶನ ಟೆನಿಸ್ ಟೂರ್ನಿ ಆಯೋಜಿಸಿದ್ದರು. ಈ ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಜೊಕೋವಿಕ್, ಪತ್ನಿ ಜೆಲೆನಾ, ಸ್ಟಾರ್ ಆಟಗಾರರಾದ ಗ್ರಿಗರ್ ಡಿಮಿಟ್ರೋವ್, ಬೊರ್ನಾ ಕೋರಿಕ್ ಮತ್ತು ವಿಕ್ಟರ್ ಟ್ರಾಯ್ಕಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ, ಕೊರೊನಾ ಸಂದರ್ಭದಲ್ಲಿ ಪ್ರದರ್ಶನ ಆಯೋಜಿಸಿದ್ದ ಜೊಕೊವಿಕ್ ಟೀಕೆಗೆ ಗುರಿಯಾಗಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಜೊಕೊವಿಕ್, ಇದೊಂದು ಅಜೆಂಡಾ, ಯಾರದ್ದಾದರೂ ದೊಡ್ಡ ಹೆಸರನ್ನು ಕೆಡಿಸಲು ಈ ರೀತಿ ಮಾಡಲಾಗುತ್ತದೆ. ನಾವು ಎಲ್ಲಾ ಕಾನೂನು ನಿಯಮಗಳನ್ನು ಪಾಲಿಸಿ ಟೂರ್ನಿ ಆಯೋಜನೆ ಮಾಡಿದ್ದೆವು ಮತ್ತು ಇದರಿಂದ ಪಾಠವನ್ನೂ ಕಲಿತಿದ್ದೇವೆ. ನಮ್ಮ ಉದ್ದೇಶ ಒಳ್ಳೆಯದಾಗಿತ್ತು. ಬಾಲ್ಕನ್ ಪ್ರದೇಶದ ಆಟಗಾರರು ಮತ್ತು ಟೆನಿಸ್ ಫೆಡರೇಷನ್‌ಗಳಿಗೆ ಸಹಾಯ ಮಾಡಲು ಮಾನವೀಯ ನೆಲೆಯಲ್ಲಿ ನಾವು ಟೂರ್ನಿಯನ್ನು ಆಯೋಜನೆ ಮಾಡಿದ್ದೆವು ಎಂದು ಹೇಳಿದ್ದಾರೆ.
ಸದ್ಯ, ಕೊರೊನಾ ಸೋಂಕಿನಿಂದ ಮುಕ್ತರಾಗಿರುವ 33 ರ ಹರೆಯದ ಜೊಕೊವಿಕ್ ಮಂಗಳವಾರ ತರಬೇತಿಗೆ ಮರಳಿದ್ದು, ಅವರು ಈ ವರ್ಷದ ಯುಎಸ್ ಓಪನ್ನಲ್ಲಿ ಆಡುತ್ತಾರೆಯೇ ಎಂಬವುದರ ಬಗ್ಗೆ ಇನ್ನೂ ಖಚಿತವಾಗಿಲ್ಲ.