ರಾಂಚಿ: ಇಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವಿನ ಜೈತ್ರಯಾತ್ರೆಯನ್ನು ಮುಂದುವರಿಸಿರುವ ಭಾರತ ಮಹಿಳಾ ಹಾಕಿ ತಂಡ, ಮೂರನೇ ಪಂದ್ಯದಲ್ಲೂ ಗೆಲುವು ಸಾಧಿಸಿದೆ. ಚೀನಾ ವಿರುದ್ಧ ನಡೆದ ಪಂದ್ಯದಲ್ಲಿ ದೀಪಿಕಾ ಮತ್ತು ಸಲೀಮಾ ಟೆಟೆ ಅವರ ತಲಾ ಒಂದು ಗೋಲುಗಳ ನೆರವಿನಿಂದ 2-1 ಗೋಲುಗಳ ರೋಚಕ ಜಯ ದಾಖಲಿಸಿತು.
15ನೇ ನಿಮಿಷದಲ್ಲಿ ಭಾರತದ ದೀಪಿಕಾ ಗೋಲಿನ ಖಾತೆ ತೆರೆದರೆ, ಸಲೀಮಾ ಟೆಟೆ 26ನೇ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಮುನ್ನಡೆ ತಂದುಕೊಟ್ಟರು. ಚೀನಾದ ಪರವಾಗಿ ಏಕೈಕ ಗೋಲು ಜಿಯಾಕಿ ಜಾಂಗ್ ಅವರಿಂದ 41 ನೇ ನಿಮಿಷದಲ್ಲಿ ಬಂದಿತು.
ಜಿದ್ದಾಜಿದ್ದಿನ ಹೋರಾಟ: ಆರಂಭದಿಂದಲೂ ಇತ್ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಭಾರತದ ಮಹಿಳೆಯರು ರಕ್ಷಣೆಯ ಜೊತೆಗೆ ಆಕ್ರಮಣಕಾರಿ ಆಟವಾಡಿದರು. ಪಂದ್ಯದಲ್ಲಿ ಚೆಂಡಿನ ಮೇಲೆ ಅತಿ ಹೆಚ್ಚು ಹಿಡಿತ ಸಾಧಿಸಿದ ಭಾರತ ಮಹಿಳೆಯರು, ಚೀನಾದ ರಕ್ಷಣಾ ಗೋಡೆಯನ್ನು ಹಲವು ಬಾರಿ ಭೇದಿಸಿದರು.
ಮೊದಲ ಕ್ವಾರ್ಟರ್‌ನ ಕೊನೆಯ ನಿಮಿಷಗಳಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ, ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಡವಿತು. ಇದಾದ ಬಳಿಕ ಪೆನಾಲ್ಟಿ ಸ್ಟ್ರೋಕ್ ಸಿಕ್ಕಿತು. ಆಗ ಸ್ಟಿಕ್ ಕೈಗೆತ್ತಿಕೊಂಡ ದೀಪಿಕಾ ನಿಖರ ಗುರಿ ಸಾಧಿಸಿ, ಚೆಂಡನ್ನು ಗೋಲು ಸೇರಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ತಂದರು.
ಮೊದಲ ಗೋಲು ಬಿಟ್ಟುಕೊಟ್ಟ ನಂತರ ಎಚ್ಚೆತ್ತುಕೊಂಡ ಚೀನಾ ಮಹಿಳೆಯರು ಆಕ್ರಮಣಕಾರಿ ಆಟಕ್ಕೆ ಇಳಿದರು. ಗೋಲು ಗಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ, ಭಾರತದ ನಾಯಕಿ ಸವಿತಾ ತಡೆಗೋಡೆಯಾಗಿ ನಿಂತು ಚೀನಾದ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಿದರು. ಭಾರತದ ಮುನ್ನಡೆಯನ್ನು ಕಾಪಾಡಿದರು.
ಇದೇ ವೇಳೆ ಭಾರತವೂ ಚೀನಾದ ಮೇಲೆ ಒತ್ತಡ ಹೇರಲು ಶುರು ಮಾಡಿತು. ಆಕ್ರಮಣಕಾರಿಯಾಗಿ ಚೆಂಡನ್ನು ಬಳಸಿದ ತಂಡದ ಸಲೀಮಾ ಟೆಟೆ (26ನೇ ನಿಮಿಷ) ವೃತ್ತದಿಂದ ಅಂಚಿನಿಂದ ಬಲವಾಗಿ ಹೊಡೆದು ತಂಡಕ್ಕೆ ಎರಡನೇ ಗೋಲು ತಂದರು. ಇದರಿಂದ 2-0 ಮುನ್ನಡೆ ಸಿಕ್ಕಿತು.
ತಿರುಗಿಬಿದ್ದ ಚೀನೀ ಮಹಿಳೆಯರು: ಎರಡನೇ ಅವಧಿಯಲ್ಲಿ ಚೀನೀ ಮಹಿಳೆಯರು ತಮ್ಮ ನೈಜ ಆಟಕ್ಕಿಳಿದರು. ಆರಂಭಿಕ ಹಂತದಲ್ಲಿ ಭಾರತ ಹಲವು ಪೆನಾಲ್ಟಿ ಕಾರ್ನರ್ ಅನ್ನು ಪಡೆದುಕೊಂಡಿತು. ಆದರೆ, ಚೀನಾದ ರಕ್ಷಣಾ ಪಡೆಯು ಎಲ್ಲವನ್ನೂ ತಡೆಯಿತು. ಆತಿಥೇಯ ಭಾರತಕ್ಕೆ ಇನ್ನಷ್ಟು ಗೋಲು ದಾಖಲಿಸದಂತೆ ನೋಡಿಕೊಂಡಿತು.
ಈ ಮಧ್ಯೆ 41 ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಚೀನಾದ ಜಿಯಾಕಿ ಜಾಂಗ್ ವ್ಯರ್ಥ ಮಾಡಲಿಲ್ಲ. ಚೆಂಡನ್ನು ಗೋಲು ಬಾರಿಸುವ ಮೂಲಕ ಅಂತರವನ್ನು 2-1 ಕ್ಕೆ ಇಳಿಸಿದರು. ಇದಾದ ಬಳಿಕ ಮತ್ತೆ ಗೋಲಿಗೆ ಪ್ರಯತ್ನಿಸಿದರೂ ಯಶ ಕಾಣಲಿಲ್ಲ. ಅಂತಿಮವಾಗಿ ಭಾರತ 2-1 ರಿಂದ ಗೆಲುವು ಸಾಧಿಸಿತು.
ಭಾರತಕ್ಕೆ ಮೂರನೇ ಗೆಲುವು: ಆತಿಥೇಯ ಭಾರತ ಮಹಿಳಾ ತಂಡಕ್ಕಿದು ಟೂರ್ನಿಯಲ್ಲಿ ಮೂರನೇ ಗೆಲುವಾಗಿದೆ. ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 7-1, ಮಲೇಶಿಯಾ ವಿರುದ್ಧ 5-0 ಗೋಲಿನಿಂದ ಗೆಲುವು ಸಾಧಿಸಿತ್ತು. ಅಕ್ಟೋಬರ್ 31 ರಂದು ನಾಲ್ಕನೇ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ: 'ನನಗೂ ಕ್ರಿಕೆಟ್‌ಗೂ ಯಾವುದೇ ಸಂಬಂಧವಿಲ್ಲ': ರತನ್ ಟಾಟಾ ಹೀಗೆ ಹೇಳಲು ಕಾರಣವೇನು?