ಟೋಕಿಯೋ: ಮಂಗಳವಾರ ಟೋಕಿಯೋದಲ್ಲಿ 16ನೇ ಪ್ಯಾರಾಲಿಂಪಿಕ್ ಗೇಮ್ಸ್ ಆರಂಭಗೊಂಡಿದೆ. ಕೋವಿಡ್ 19 ಸಾಂಕ್ರಾಮಿಕದ ನಡುವೆಯೂ ಪ್ಯಾರಾ ಅಥ್ಲೀಟ್ಗಳು ತಾವು ಕ್ರೀಡೆಯಲ್ಲಿ ಮುಂದುವರಿಯುವ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದ್ದಾರೆ.
ಪ್ಯಾರಾಲಿಂಪಿಕ್ಸ್ 57 ವರ್ಷಗಳ ನಂತರ ಟೋಕಿಯೋಗೆ ಮರಳಿದೆ. ಜೊತೆಗೆ ಈ ವಿಶೇಷ ಕ್ರೀಡಾಕೂಟವನ್ನು 2ನೇ ಬಾರಿ ಆಯೋಜಿಸಿದ ಮೊದಲ ನಗರ ಎಂಬ ಕೀರ್ತಿಗೆ ಜಪಾನ್ ರಾಜಧಾನಿ ಪಾತ್ರವಾಗಿದೆ.
ಇದು ವೈವಿಧ್ಯತೆ ಮತ್ತು ಒಗ್ಗೂಡುವಿಕೆಯ ಸಂಕೇತವಾಗಿ ಪ್ಯಾರಾ ಏರ್ಪೋರ್ಟ್ ನಿರ್ಮಿಸಲಾಗಿತ್ತು. ಸಮಾರಾಂಭವನ್ನು ಪ್ಯಾರಾ ಅಥ್ಲೀಟ್‌ಗಳ ಬಲವನ್ನು ಚಿತ್ರಿಸುವ ವಿಡಿಯೋದೊಂದಿಗೆ ಆರಂಭವಾಯಿತು. ಈ ವಿಡಿಯೋದಲ್ಲಿ ಸೌಮ್ಯವಾದ ತಂಗಾಳಿ ನಿಧಾನವಾಗಿ ಸಾಗುತ್ತಾ ನಂತರ ಬಿರುಗಾಳಿಯಾಗಿ ಸ್ಟೇಡಿಯಂ ತಲುಪಿ, ಇಡೀ ಮೈದಾನವನ್ನು ವ್ಯಾಪಿಸುವುದನ್ನು ತೋರಿಸಲಾಯಿತು.
ನಂತರ ಕೆಲ ಸಿಬ್ಬಂದಿ ಪಟಾಕಿಗಳನ್ನು ಸಿಡಿಸಿ ಕ್ರೀಡಾಕೂಟಕ್ಕೆ ಬೆಳಕಿನೊಂದಿಗೆ ಚಾಲನೆ ಕೊಟ್ಟರು. ಇದಕ್ಕೂ ಮೊದಲು, ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷ ಆಂಡ್ರ್ಯೂ ಪಾರ್ಸನ್ಸ್ ಮತ್ತು ಜಪಾನಿನ ಚಕ್ರವರ್ತಿ ನರುಹಿಟೊ ಅವರನ್ನು ಕ್ರೀಡಾಂಗಣಕ್ಕೆ ಸ್ವಾಗತಿಸಲಾಯಿತು.
ಈ ಆವೃತ್ತಿಯ ಪ್ಯಾರಾಲಿಂಪಿಕ್ಸ್ನಲ್ಲಿ ದಾಖಲೆಯ 4403 ಅಥ್ಲೀಟ್ಗಳು ಭಾಗವಹಿಸುತ್ತಿದ್ದಾರೆ. ಈ ಹಿಂದೆ 2016ರ ರಿಯೋ ಕ್ರೀಡಾಕೂಟದಲ್ಲಿ 4328 ಅಥ್ಲೀಟ್ಗಳು ಭಾಗವಹಿಸಿದ್ದು ದಾಖಲೆಯಾಗಿತ್ತು. ಈ ಕೂಟದಲ್ಲಿ 2550 ಪುರುಷ ಅಥ್ಲೀಟ್ ಮತ್ತು 1853 ಮಹಿಳಾ ಅಥ್ಲೀಟ್ಗಳು ಭಾಗವಹಿಸುತ್ತಿದ್ದಾರೆ. ಭಾರತದ ಪರ 54 ಕ್ರೀಡಾಪಟುಗಳು ಸ್ಪರ್ಧೆಯ ಭಾಗವಾಗಲಿದ್ದಾರೆ.
ಇದನ್ನು ಓದಿ: ಏಷ್ಯನ್ ಯೂತ್ ಬಾಕ್ಸಿಂಗ್: ಸೆಮಿಫೈನಲ್ ತಲುಪಿದ ನಾಲ್ವರು ಭಾರತೀಯ ಬಾಕ್ಸರ್ಗಳು