ಜಲಂಧರ್ (ಪಂಜಾಬ್): ಭಾರತದಲ್ಲಿ ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗಿದ್ದು, ಪ್ರತಿಯೊಬ್ಬರು ತಮ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಿದ್ದಾರೆ. WWE ನಲ್ಲಿ ದಿ ಗ್ರೇಟ್ ಖಲಿ ಎಂದೇ ಖ್ಯಾತರಾಗಿರುವ ದಲೀಪ್ ಸಿಂಗ್ ರಾಣಾ ತಮ್ಮ ಮಾರ್ಗದರ್ಶನಕರನ್ನು ಸ್ಮರಿಸಿಕೊಂಡಿದ್ದು, ತಮ್ಮ ಯಶಸ್ವಿನ ಶ್ರೇಯವನ್ನು ಅರ್ಪಿಸಿದ್ದಾರೆ.
ಖಲಿ ತಾವು ಕುಸ್ತಿಪಟುವಾಗಿ ಯಶಸ್ವಿಯಾಗಲು ಕಾರಣರಾದ ಪಂಜಾಬ್ನ ಮಾಜಿ ಡಿಸಿಪಿ ಮಹಲ್ ಸಿಂಗ್ ಭುಲ್ಲಾರ್ ಅವರಿಗೆ ಯಶಸ್ಸಿನ ಶ್ರೇಯವನ್ನು ಅರ್ಪಿಸಿದ್ದಾರೆ. ಅವರ ಪ್ರಕಾರ ಕೇವಲ ದಲೀಪ್ ಸಿಂಗ್ ರಾಣಾ ಅಷ್ಟೇ ಆಗಿದ್ದ ತಮ್ಮನ್ನು ಇಡೀ ವಿಶ್ವಕ್ಕೆ ದಿ ಗ್ರೇಟ್ ಖಲಿ ಎಂದು ಚಿರಪರಿಚಿತರಾಗಲು ಕಾರಣ ತಮ್ಮ ಗುರುಗಳು ಎಂದಿದ್ದಾರೆ.
ದಿ ಗ್ರೇಟ್ ಖಲಿ ಪ್ರಸ್ತುತ ಜಲಂಧರ್ನಲ್ಲಿ WWE ಕಾಂಟಿನೆಂಟಾಲ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ ಎಂಬ ಆಕಾಡೆಮಿಯನ್ನು ನಡೆಸುತ್ತಿದ್ದಾರೆ. ಅಲ್ಲಿ ಸಾವಿರಾರು ಕುಸ್ತಿಪಟುಗಳು ಖಲಿ ಅವರಿಂದ ರೆಸ್ಲಿಂಗ್ ಕೌಶಲ್ಯಗಳು, ತಂತ್ರಗಳನ್ನು ಕಲಿಯುತ್ತಿದ್ದಾರೆ. ಜೀವನದಲ್ಲಿ ಪೋಷಕರಿಗಿಂತ ಗುರು ಮತ್ತು ಶಿಸ್ತು ಅತಿ ಮುಖ್ಯವಾದ ಪಾತ್ರವಹಿಸುತ್ತದೆ ಎಂದು ಖಲಿ ಅಭಿಪ್ರಾಯಪಟ್ಟಿದ್ದಾರೆ.
1994ರಲ್ಲಿ ಪಂಜಾಬ್‌ಗೆ ಬಂದಾಗ, ನಾನು ಪಂಜಾಬ್ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದೆ. ನನ್ನ ಗುರುಗಳು ಕ್ರೀಡೆಗಳತ್ತ ಗಮನ ಹರಿಸಬೇಕೆಂದು ನನಗೆ ಸಲಹೆ ನೀಡಿದರು. ಅವರು ನನ್ನ ಗಮನವನ್ನು ಕ್ರೀಡೆಯತ್ತ ಸೆಳೆದರು. ಅವರು ನನಗೆ ಮಾದರಿ ಮತ್ತು ಅವರು ನನಗೆ ಕ್ರೀಡೆಯ ಮೂಲಭೂತ ಅಂಶಗಳನ್ನು ಕಲಿಸಿದರು. ಅವರು ನನ್ನನ್ನು ಶಾಟ್ಪುಟ್ ಆಟಗಾರನನ್ನಾಗಿ ಮಾಡಿ ಭಾರತವನ್ನು ಹೆಮ್ಮೆಪಡುವಂತೆ ಮಾಡಬೇಕೆಂಬುದು ಬಯಕೆಯಾಗಿತ್ತು ಎಂದು ತಮ್ಮ ಗುರುವನ್ನು ನೆನೆದಿದ್ದಾರೆ.