ಟೋಕಿಯೋ(ಜಪಾನ್): ಕೋವಿಡ್-19 ಎರಡನೇ ಅಲೆಯ ನಡುವೆ ಜಪಾನ್‌ನ ಟೋಕಿಯೊದಲ್ಲಿ ಈ ವರ್ಷದ ಒಲಂಪಿಕ್ಸ್ ಕ್ರೀಡಾಕೂಟಗಳು ನಡೆಯಲಿವೆ. ಮಹಾಮಾರಿಯ ಅವಾಂತರದ ನಡುವೆ ಕೆಲವು ಕಟ್ಟುನಿಟ್ಟಿನ ನೀತಿ ನಿಯಮಗಳ ಅನುಸಾರ ಜಾಗತಿಕ ಮಟ್ಟದ ಕ್ರೀಡಾ ಸಂಗ್ರಾಮ ನಿಗದಿಯಾಗಿದೆ.
ಮುಂದಿನ ತಿಂಗಳು (ಜುಲೈ) 23ರಿಂದ ಒಲಂಪಿಕ್ಸ್ ಪ್ರಾರಂಭವಾಗುತ್ತಿದೆ. ವಿಶ್ವದ ವಿವಿಧ ಮೂಲೆಗಳಿಂದ 11 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಸಂದರ್ಭದಲ್ಲಿ ಪದಕ ಬೇಟೆ ನಡೆಸಲಿದ್ದಾರೆ. ಈ ಮಹಾ ಕ್ರೀಡಾಕೂಟದದ ವೇಳೆ ಸ್ಪರ್ಧಾಳುಗಳಿಗೆ ಉಚಿತ ಕಾಂಡೋಮ್‌ಗಳವನ್ನು ನೀಡಲಾಗುತ್ತದೆ. ಅದೇ ರೀತಿ ಈ ವರ್ಷವೂ ಕೂಡ ಭಾಗವಹಿಸುವ ಸ್ಫರ್ಧಾಳುಗಳಿಗೆ ಲಕ್ಷಾಂತರ ಕಾಂಡೋಮ್ ನೀಡಲು ಸಂಘಟಕರು ಮುಂದಾಗಿದ್ದಾರೆ. ನಿಯಮಗಳುನುಸಾರ ಪ್ರತಿ ಸ್ಪರ್ಧಿಗೆ ತಲಾ 14 ಕಾಂಡೋಮ್ ಸಿಗಲಿದೆ. ಸುಮಾರು 1.60 ಲಕ್ಷ ಕಾಂಡೋಮ್ ಅನ್ನು ಸ್ಪರ್ಧಿಗಳಿಗೆ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ.
ಉದ್ದೇಶವೇನು?
ಒಲಂಪಿಕ್ಸ್ ವೇಳೆ ಏಡ್ಸ್ ರೋಗ ತಡೆಗಟ್ಟುವುದು ಕಾಂಡೋಮ್ ವಿತರಣೆಯ ಹಿಂದಿನ ಸದುದ್ದೇಶವಾಗಿದೆ. ಆದರೆ ಈ ಬಾರಿ ಕ್ರೀಡಾಪಟುಗಳು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಹೌದು, ಯಾರೂ ಕೂಡಾ ಈ ಸಲ ಕಾಂಡೋಮ್ ಅನ್ನು ಅಲ್ಲಿ ಬಳಸುವಂತಿಲ್ಲ. ಇವುಗಳನ್ನು ಸ್ಪರ್ಧಾಳುಗಳು ಸ್ಮರಣಿಕೆಯಂತೆ ತಮ್ಮ ದೇಶಗಳಿಗೆ ಕೊಂಡೊಯ್ದು ನಂತರವೇ ಬಳಸುವಂತೆ ತಿಳಿಸಲಾಗಿದೆ.
ಸಿಯೋಲ್ ಕ್ರೀಡಾಕೂಟದಲ್ಲಿ ಉಂಟಾದ ಭೀತಿ:
1988ರ ಸಿಯೋಲ್ ಒಲಿಂಪಿಕ್ಸ್ ವೇಳೆ ಹರಡಿದ ಏಡ್ಸ್ ರೋಗದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಪ್ರತಿ ಒಲಿಂಪಿಕ್ಸ್ ವೇಳೆ ಕ್ರೀಡಾಳುಗಳಿಗೆ ತಾನೇ ಕಾಂಡೋಮ್‌ಗಳನ್ನು ಉಚಿತವಾಗಿ ವಿತರಿಸುತ್ತಾ ಬಂದಿದೆ.
2016ರಲ್ಲಿ ಬ್ರೆಜಿಲ್‌ನಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್ ವೇಳೆ ಸುಮಾರು 4,50,000 ಕಾಂಡೋಮ್‌ಗಳನ್ನು ವಿತರಿಸಲಾಗಿತ್ತು. ಒಬ್ಬೊಬ್ಬ ಕ್ರೀಡಾಪಟುಗಳಿಗೆ ತಲಾ 42 ಕಾಂಡೋಮ್ ವಿತರಿಸಲಾಗಿತ್ತು.
ಒಲಂಪಿಕ್ಸ್ ಗ್ರಾಮದಲ್ಲಿ ಕ್ರೀಡಾಪಟುಗಳ ಮಧ್ಯೆ ದೈಹಿಕ ಸ್ಪರ್ಶಕ್ಕೆ ಅವಕಾಶವಿಲ್ಲ
ಈ ವರ್ಷ ಐಒಸಿ(IOC) ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಒಲಿಂಪಿಕ್ಸ್ ವೇಳೆ ಕ್ರೀಡಾಪಟುಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಪ್ರತಿಯೊಬ್ಬರ ನಡುವೆ 2 ಮೀಟರ್ಗಳ ಅಂತರವಿರಬೇಕೆಂದು ಸೂಚಿಸಲಾಗಿದೆ. ಒಲಿಂಪಿಕ್ ಗ್ರಾಮದಲ್ಲೂ ಕ್ರೀಡಾಪಟುಗಳ ನಡುವೆ ದೈಹಿಕ ಸ್ಪರ್ಶ ಇರಬಾರದು. ಕನಿಷ್ಠ ಹ್ಯಾಂಡ್ ಶೇಕ್ ಮತ್ತು ಅಪ್ಪುಗೆಯನ್ನೂ ಮಾಡಬಾರದು ಎಂದು ಹೇಳಿರುವ ಐಒಸಿ, ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರಿ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.