ಬೆಂಗಳೂರು: ಪ್ಲೇ ಆಫ್ ಪ್ರವೇಶಿಸಲು ಗೆಲ್ಲಬೇಕಾಗಿದ್ದ ಪಂದ್ಯದಲ್ಲಿ ಅದ್ದೂರಿ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್ 46-24ರ ಅಂತರದಿಂದ ಹರಿಯಾಣ ಸ್ಟೀಲರ್ಸ್ ಮಣಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ನಾಯಕ ಪವನ್ ಶೆರಾವತ್ ಆಲ್ರೌಂಡರ್ ಆಗಿ ಕಣಕ್ಕಿಳಿದರು. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶನ ತೋರಿದ ಅವರು 13 ರೈಡ್ ಮತ್ತು 7 ಟ್ಯಾಕಲ್ ಅಂಕಗಳ ಸಹಿತ 20 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಸಾಥ್ ನೀಡಿದ ಭರತ್ 5 ರೈಡ್ ಮತ್ತು 3 ಟ್ಯಾಕಲ್ ಅಂಕ ಪಡೆದರು.
ಅಮನ್ 4, ಸೌರಭ್ ನಂಡಲ್ 3 ಟ್ಯಾಕಲ್ ಅಂಕ ಪಡೆದರು. ಆರಂಭದಿಂದಲೇ ಸ್ಟೀಲರ್ ರೈಡರ್ಗಳನ್ನು ಕಟ್ಟಿಹಾಕಿದ ಬುಲ್ಸ್ ಮೊದಲಾರ್ಧದ ವೇಳೆಗೆ ಆಲೌಟ್ ಮಾಡಿ 20-14ರಲ್ಲಿ ಮುನ್ನಡೆ ಪಡೆದುಕೊಂಡಿತು.
ಮುನ್ನಡೆ ಇದ್ದರೂ ತನ್ನ ಆಕ್ರಮಣ ಆಟವನ್ನು ಬಿಡದ ಬುಲ್ಸ್ ದ್ವಿತೀಯಾರ್ಧದಲ್ಲೂ 2 ಬಾರಿ ಹರಿಯಾಣ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಒಟ್ಟು 22 ಅಂಕಗಳಿಂದ ಗೆದ್ದ ಬುಲ್ಸ್ ಪ್ರಸ್ತುತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಆದರೂ ಪ್ಲೇ ಆಫ್ ಸ್ಥಾನ ಖಚಿತಗೊಳ್ಳಬೇಕಾದರೆ ಬೇರೆ ತಂಡಗಳ ಫಲಿತಾಂಶ ಪ್ರಮುಖ ಪಾತ್ರವಹಿಸಲಿದೆ. ನಾಳಿನ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್ ವಿರುದ್ಧ ಜೈಪುರ ಗೆದ್ದರೆ, ನಾಳೆ ಗುಜರಾತ್ ಲೈಯನ್ಸ್ ವಿರುದ್ಧ ತಮಿಳ್ ತಲೈವಾಸ್ ಅಥವಾ ಶನಿವಾರ ಪಾಟ್ನಾ ಪೈರೇಟ್ಸ್ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧ ಗೆಲುವು ಸಾಧಿಸಿದರೆ ಬೆಂಗಳೂರು ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ.
ಇದನ್ನೂ ಓದಿ:ಯು ಮುಂಬಾ ಕನಸು ಭಗ್ನಗೊಳಿಸಿ ಪ್ಲೇ ಆಫ್ಗೆ ಅರ್ಹತೆ ಪಡೆದ ಯುಪಿ ಯೋಧಾ