ಲಂಡನ್: ನಾನು ಭವಿಷ್ಯದ ಟೆನಿಸ್ ಟೂರ್ನಮೆಂಟ್ಗಳನ್ನು ತಪ್ಪಿಸಿಕೊಳ್ಳುತ್ತೇನೆ ಹೊರತು ಬಲವಂತವಾಗಿ ಕೋವಿಡ್ 19 ಲಸಿಕೆಯನ್ನು ಹಾಕಿಸಿಕೊಳ್ಳಲು ಬಯಸುವುದಿಲ್ಲ ಎಂದು ವಿಶ್ವದ ನಂಬರ್ 1 ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಮಂಗಳವಾರ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಕೋವಿಡ್ 19 ಲಸಿಕೆ ಹಾಕಿಸಿಕೊಳ್ಳದ ವಿಚಾರದಲ್ಲಿ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಕಾನೂನುನಾತ್ಮಕ ಹೋರಾಟ ನಡೆಸಿದರಾದರೂ ಕೊನೆಗೆ ಪರಾಜಯ ಕಂಡು ಗ್ರ್ಯಾಂಡ್ಸ್ಲಾಮ್ನಿಂದ ಹೊರಬಿದ್ದರು. ಇದೀಗ 20 ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಡಕ್ಕೆ ಪ್ರತಿಕ್ರಿಯಿಸಿದ್ದು, ತಾನೂ ಬಲವಂತವಾಗಿ ಲಸಿಕೆ ಹಾಕಿಸಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಇದಕ್ಕಾಗಿ ಮುಂದೆ ಟೆನಿಸ್ ಟೂರ್ನಿಗಳಿಂದಲೇ ಬೇಕಾದರೆ ದೂರ ಉಳಿಯಲು ಸಿದ್ಧ ಎಂದು ಹೇಳಿದ್ದಾರೆ.
"ನಾನು ಲಸಿಕಾ ವಿರೋಧಿ ಆಂದೊಲನದ ಜೊತೆ ಯಾವುದೇ ಸಂಬಂಧ ಹೊಂದಿಲ್ಲ, ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಿದ್ದೇನೆ" ಎಂದು ಜೊಕೊವಿಕ್ ಹೇಳಿದ್ದಾರೆ. ಸರ್ಬಿಯನ್ ಸ್ಟಾರ್ಗೆ ವ್ಯಾಕ್ಸಿನ್ ಕಡ್ಡಾಯವಾಗಿರುವ ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಪಂದ್ಯಾವಳಿಗಳನ್ನು ಕಳೆದುಕೊಳ್ಳಲು ಸಿದ್ದರಿದ್ದೀರಾ? ಎಂದು ಕೇಳಿದ್ದಕ್ಕೆ " ಹಾದು, ನಾನು ಅದಕ್ಕೆ ಬೆಲೆ ತೆರಲು ಸಿದ್ಧನಿದ್ದೇನೆ" ಎಂದು ಬಿಬಿಸಿ ನ್ಯೂಸ್ಗೆ ಹೇಳಿದ್ದಾರೆ.
ನಾನು ಎಂದಿಗೂ ಲಸಿಕೆಗೆ ವಿರುದ್ಧವಾಗಿಲ್ಲ, ಬಾಲ್ಯದಲ್ಲಿ ಲಸಿಕೆಗಳನ್ನು ಹಾಕಿಸಿಕೊಂಡಿದ್ದೇನೆ ಎಂದು ದೃಢಪಡಿಸಿದ ಜೊಕೊವಿಕ್, ನನ್ನ ದೇಹಕ್ಕೆ ಏನನ್ನು ತೆಗೆದುಕೊಳ್ಳಬೇಕು ಎಂಬುದರ ಆಯ್ಕೆಯನ್ನು ನಿರ್ಧರಿಸುವ ಸ್ವಾತಂತ್ರ್ಯ ನಮ್ಮದಾಗಿರಬೇಕು ಎನ್ನುವುದನ್ನು ನಾನು ಬೆಂಬಲಿಸುತ್ತೇನೆ. ಇದಕ್ಕಾಗಿ ಭವಿಷ್ಯದಲ್ಲಿ ಕೆಲವು ಟ್ರೋಫಿಗಳನ್ನು ಬಿಟ್ಟುಕೊಡುವುದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.