ಭೋಪಾಲ್(ಮಧ್ಯ ಪ್ರದೇಶ): ಪಶ್ಚಿಮ ಬಂಗಾಳದ ಮೆಹುಲಿ ಘೋಷ್ ಭಾನುವಾರ ಇಲ್ಲಿ ನಡೆದ ನ್ಯಾಷನಲ್ ಟಿ2 ಟ್ರಯಲ್ಸ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕರ್ನಾಟಕದ ತಿಲೋತ್ತಮ ಸೇನ್ ಅವರನ್ನು 17-9 ರಿಂದ ಸೋಲಿಸುವ ಮೂಲಕ ಚಿನ್ನದ ಪದಕ ಗೆದ್ದರು.
ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಮೆಹುಲಿ 630.1 ಅಂಕ ಪಡೆದು ಅಗ್ರ 8ರಲ್ಲಿ 6ನೇ ಸ್ಥಾನ ಗಳಿಸಿದ್ದರು. ಗುಜರಾತ್‌ನ ಎಳವೆನಿಲ್ ವಲರಿವನ್ 632.1 ಅಂಕಗಳಿಸಿ ಅಗ್ರಸ್ಥಾನ ಪಡೆದಿದ್ದರು. ಆದರೆ ಫೈನಲ್ಸ್ನಲ್ಲಿ ವಲರಿವನ್ 37 ಅಂಕ ಪಡೆದು ಕಂಚಿನ ಪದಕ ಪಡೆದರೆ, ಮೆಹುಲಿ 48 ಮತ್ತು ತಿಲೋತ್ತಮ 38.5 ಅಂಕ ಪಡೆದು ಮೊದಲೆರಡು ಸ್ಥಾನ ಪಡೆದುಕೊಂಡರು.
ತಿಲೋತ್ತಮ ಜೂನಿಯರ್ ವಿಭಾಗದಲ್ಲಿ ಚಿನ್ನ ಮತ್ತು ಯೂತ್ ಮಹಿಳೆಯರ 10 ಮೀಟರ್ ಏರ್ ರೈಫಲ್ ಟಿ2 ಟ್ರಯಲ್ಸ್ನಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದರು. ಕರ್ನಾಟಕದ ಶೂಟರ್ ಒಟ್ಟಾರೆ ಟ್ರಯಲ್ಸ್ ಇವೆಂಟ್ನಲ್ಲಿ ಮೂರು ಪದಕಗಳನ್ನು ಪಡೆದಿದ್ದಾರೆ.
ಜೂನಿಯರ್ಸ್ ಮಹಿಳಾ ಫೈನಲ್ಸ್ನಲ್ಲಿ ತಿಲೋತ್ತಮ ಮಹಾರಾಷ್ಟ್ರದ ಆರ್ಯ ರಾಜೇಶ್ ಬೋರ್ಸೆ ವಿರುದ್ಧ 17-5 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಬಾಕುವಿನಲ್ಲಿ ನಡೆಯಲಿರುವ ಮುಂಬರುವ ವಿಶ್ವಕಪ್ ಮತ್ತು ಜೂನಿಯರ್ ವಿಶ್ವಕಪ್‌ಗೆ ಭಾರತೀಯ ತಂಡಗಳನ್ನು ಈ ಟ್ರಯಲ್ಸ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಕೂಟದಲ್ಲಿ ಸುಮಾರು 3300 ಶೂಟರ್ಗಳು ಭಾಗವಹಿಸಿದ್ದಾರೆ.
ಇದನ್ನೂ ಓದಿ:ಜರ್ಮನ್ ಓಪನ್: ವಿಶ್ವದ ನಂ.1, ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಆಕ್ಸೆಲ್ಸನ್ ಮಣಿಸಿದ ಲಕ್ಷ್ಯ ಸೇನ್