ಹೈದರಾಬಾದ್(ಡೆಸ್ಕ್): ಟೆನಿಸ್ ವೃತ್ತಿ ಜೀವನದಲ್ಲಿ ಎಲ್ಲಾ 4 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದಿರುವ ರಷ್ಯಾದ ಟೆನಿಸ್ ಸ್ಟಾರ್ ಮರಿಯಾ ಶರಪೋವಾ ಮಂಗಳವಾರ 35ನೇ ಜನ್ಮದಿನ ಆಚರಿಸಿಕೊಂಡಿದ್ದು, ಅದೇ ದಿನ ತಾವು ಮತ್ತು ತಮ್ಮ ಭಾವಿ ಪತಿ ಅಲೆಕ್ಸಾಂಡರ್ ಗಿಲ್ಕ್ಸ್ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
ಪ್ರಸಿದ್ಧ ಮಾಜಿ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಬೀಚ್ ಬಳಿ ತೆಗೆದಿರುವ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ, "ಅಮೂಲ್ಯ ಆರಂಭ. ಇಬ್ಬರಿಗಾಗಿ ಹುಟ್ಟುಹಬ್ಬದ ಕೇಕ್ ತಿನ್ನುವುದು ನನ್ನ ವಿಶೇಷತೆ" ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.
![Maria Sharapova Announces Pregnancy](https://etvbharatimages.akamaized.net/etvbharat/prod-images/ten_ot_mariababy_20220420sn_2004a_1650422461_1103.jpg)
ವೃತ್ತಿ ಜೀವನದಲ್ಲಿ 5 ಗ್ರ್ಯಾಂಡ್‌ಸ್ಲಾಮ್ ಗೆದ್ದಿರುವ ಮಾಜಿ ವಿಶ್ವದ ನಂಬರ್ 1 ಆಟಗಾರ್ತಿ ಎರಡು ವರ್ಷಗಳ ಹಿಂದೆ ಸ್ಪರ್ಧಾತ್ಮಕ ಟೆನಿಸ್ಗೆ ನಿವೃತ್ತಿ ಘೋಷಿಸಿದ್ದರು. 2020ರ ಡಿಸೆಂಬರ್ನಲ್ಲಿ ಶರಪೋವಾ ಬ್ರಿಟಿಷ್ ಉದ್ಯಮಿ ಗಿಲ್ಕ್ಸ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ತಿಳಿಸಿದ್ದರು.
ಈ ಜೋಡಿ 2018ರಿಂದಲೂ ರಿಲೇಷನ್ಶಿಪ್ನಲ್ಲಿದ್ದಾರೆ. ಗಿಲ್ಕ್ಸ್ ತನ್ನ ವೃತ್ತಿಜೀವನದ ಕೊನೆಯ ಪಂದ್ಯಗಳ ವೇಳೆ ಶರಪೋವಾ ಅವರ ಪ್ಲೇಯಿಂಗ್ ಬಾಕ್ಸ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಶರಪೋವಾ ಪೋಸ್ಟ್ ಮಾಡಿರುವ ತಾಯ್ತನದ ಪೋಸ್ಟ್ಗೆ ಗಿಲ್ಕ್ಸ್ ಹಾರ್ಟ್-ಐ ಇಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್: ಕನ್ನಡಿಗ ಅರ್ಜುನ್ ಹಲಕುರ್ಕಿ ಸೇರಿ ಭಾರತದ ಮೂವರಿಗೆ ಕಂಚು