ಅರಕಲಗೂಡು/ಹಾಸನ: ತಾಲೂಕಿನ ಮಲ್ಲಿಪಟ್ಟಣದಲ್ಲಿ ಆಯೋಜನೆಗೊಂಡಿದ್ದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಬಹಳ ರೋಚಕತೆಯಿಂದ ಕೂಡಿತ್ತು.
ಕಬ್ಬಡಿ ಪಂದ್ಯಾವಳಿಯಲ್ಲಿ ಮಾಜಿ ಸಚಿವ ಎ. ಮಂಜು ಭಾಗವಹಿಸಿ, ವೇದಿಕೆಯಲ್ಲಿ ಕ್ರೀಡಾಜ್ಯೋತಿ ಬೆಳಗಿಸಿ ಪ್ರೇಕ್ಷಕರಲ್ಲಿ ಹೊಸ ಚೈತನ್ಯ ತುಂಬಿದರು. ನಂತರ ಮಾತನಾಡಿದ ಎ. ಮಂಜು ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗಬಾರದು, ಕಬ್ಬಡಿ ಕ್ರೀಡೆಗೆ ಹೆಸರಾದ ಮಲ್ಲಿಪಟ್ಟಣದಲ್ಲಿ ಇಂದು ಕಬ್ಬಡಿ ಪಂದ್ಯಾವಳಿ ನಡೆಸಿ ಜಿಲ್ಲೆಗೆ ಗೌರವ ತಂದಿದ್ದಾರೆ. ಆಟಗಾರರು ರಾಜ್ಯ ಮಟ್ಟದಲ್ಲೂ ಪಾಲ್ಗೊಳ್ಳಲು ಇದು ವೇದಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದ ಕಬ್ಬಡಿ ಪಂದ್ಯಾವಳಿ ಆಯೋಜಿಸಲು ಸದಾ ಸಹಕಾರ ನೀಡುವುದಾಗಿ ಹೇಳಿದರು.
ಈ ಭಾಗದ ಕ್ರೀಡಾಭಿಮಾನಿಗಳಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಪಂದ್ಯಾವಳಿಯ ಪ್ರಥಮ ಮ್ಯಾಚ್ನಲ್ಲಿ ರಣವೀಳ್ಯೆ ಪಡೆದ ಆರ್.ಎನ್.ಎಸ್. ಪೇಂಟ್ಸ್ ಮತ್ತು ಸಚಿನ್ ಅಟ್ಯಾಕರ್ಸ್ ತಂಡದ ಆಟಗಾರರು ರೋಚಕ ದಾಳಿ ನಡೆಸಿ ಚಪ್ಪಾಳೆ ಗಿಟ್ಟಿಸಿದರು. ಪ್ರತಿ ಮ್ಯಾಚ್ನಲ್ಲಿ ಎಲ್ಲ ತಂಡಗಳ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು. ಪಂದ್ಯಾವಳಿಯಲ್ಲಿ 8 ತಂಡಗಳಿಂದ 96 ಆಟಗಾರರು 33 ಮ್ಯಾಚ್ಗಳಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ನಿರ್ಣಾಯಕ ಸೆಣಸಾಟ ನಡೆಸಲಿದ್ದಾರೆ.
ಹೊನಲು ಬೆಳಕಿನಲ್ಲಿ ಮಿಂದೇಳುತ್ತಿರುವ ಕಬ್ಬಡಿ ಪಂದ್ಯಾವಳಿ ವೀಕ್ಷಿಸಲು ಸಾಗರೋಪಾದಿಯಲ್ಲಿ ಜನರು ಜಮಾಯಿಸಿದ್ದು, ಗ್ಯಾಲರಿಗಳಿಂದ ತುಂಬಿ ತುಳುಕಿತು. ಮಾಜಿ ಸಚಿವ ಎ. ಮಂಜು ರಾತ್ರಿ 12 ಗಂಟೆ ತನಕ ಪಂದ್ಯಾವಳಿ ವೀಕ್ಷಿಸಿ ಆಟಗಾರರಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪ್ರದಾನ ಮಾಡಿದರು.