ಬುಡಾಪೆಸ್ಟ್: ಮೂರ್ಛೆ ಹೋಗಿ ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗುತ್ತಿದ್ದ ಅಮೆರಿಕದ ಈಜುಗಾರ್ತಿ ಅನಿತಾ ಆಲ್ವಾರೆಜ್ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಇಲ್ಲಿ ನಡೆಯುತ್ತಿರುವ 2022 FINA ವಿಶ್ವ ಅಕ್ವಾಟಿಕ್ ಚಾಂಪಿಯನ್ಶಿಪ್ ಸ್ಪರ್ಧೆಯ ವೇಳೆ ಈ ದುರಂತ ಘಟನೆ ಜರುಗಿದೆ.
ಸ್ಮಿಮ್ಮರ್ ಅನಿತಾ ಆಲ್ವಾರೆಜ್ ಈಜುತ್ತಲೇ ಮೂರ್ಛೆ ಹೋಗಿ ನೀರಿನಾಳಕ್ಕೆ ಮುಳುಗಲಾರಂಭಿಸಿದ್ದರು. ಇದನ್ನು ಗಮನಿಸಿದ ಕೋಚ್ ಆ್ಯಂಡ್ರಿ ಫುಯೆಂಟಸ್ ಒಂಚೂರೂ ತಡ ಮಾಡದೆ ನೀರಿಗೆ ಹಾರಿ ಅನಿತಾ ಅವರನ್ನು ಮೇಲಕ್ಕೆತ್ತಿ ತಂದರು. ತಕ್ಷಣವೇ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಬುಡಾಪೆಸ್ಟ್ನಲ್ಲಿ ಆಯೋಜಿಸಲಾಗಿರುವ ಮಹಿಳೆಯರ ಸೋಲೊ ಫ್ರೀ ಆರ್ಟಿಸ್ಟಿಕ್ ಈವೆಂಟ್ನಲ್ಲಿ ಭಾಗವಹಿಸಿದ್ದರು.
"ಅದು ಭಾರಿ ಆತಂಕದ ಕ್ಷಣವಾಗಿತ್ತು. ಜೀವರಕ್ಷಕರು ಏನೂ ಮಾಡದ್ದರಿಂದ ನಾನು ನೀರಿಗೆ ಜಂಪ್ ಮಾಡಲೇಬೇಕಿತ್ತು. ಒಂದು ಕ್ಷಣ ಒಂದು ಗಂಟೆಯ ತರ ಭಾಸವಾಗಿತ್ತು. ಏನೋ ಸರಿಯಿಲ್ಲ ಎಂಬುದು ನನಗೆ ಗೊತ್ತಾಗಿತ್ತು. ತಕ್ಷಣ ನೀರಿಗಿಳಿಯುವಂತೆ ನಾನು ಜೀವರಕ್ಷಕರಿಗೆ ಹೇಳುತ್ತಲೇ ಇದ್ದೆ. ಬಹುಶಃ ನಾನು ಹೇಳಿದ್ದು ಅವರಿಗೆ ಕೇಳಲಿಲ್ಲ ಅಥವಾ ಅರ್ಥವಾಗಲಿಲ್ಲ. ಆಕೆಯ ಉಸಿರಾಟ ನಿಂತು ಹೋಗಿತ್ತು. ಹೀಗಾಗಿ ಒಲಿಂಪಿಕ್ಸ್ ಫೈನಲ್ ಆಡಿದ ವೇಗದಲ್ಲಿ ನಾನು ಕೆಲಸ ಮಾಡಿದೆ." ಎಂದು ಕೋಚ್ ಆ್ಯಂಡ್ರಿ ಫುಯೆಂಟಸ್ ಹೇಳಿದ್ದಾರೆ.
ತಮ್ಮ ಮಗಳಿಗೆ ಈ ಹಿಂದೆಯೂ ಹೀಗಾಗಿತ್ತು, ಆದರೆ ಸ್ಪರ್ಧೆಗಳ ಸಮಯದಲ್ಲಿ ಎಂದೂ ಈ ರೀತಿ ಆಗಿರಲಿಲ್ಲ ಎಂದು ಅನಿತಾ ತಾಯಿ ಕಾರೆನ್ ತಿಳಿಸಿದ್ದಾರೆ.