ಅಲ್ರಯ್ಯನ್(ಕತಾರ್): ತಂಡವಾಗಿ ಆಡಿದರೆ ಬಲಿಷ್ಠ ಪಡೆಯಾದರೂ ಅದಕ್ಕೆ ಮಣ್ಣುಮುಕ್ಕಿಸಬಹುದು ಎಂಬುದನ್ನು ಕ್ರೊವೇಷಿಯಾ ಸಾಬೀತು ಮಾಡಿದೆ. ಶುಕ್ರವಾರ ರಾತ್ರಿ ನಡೆದ ಪ್ರಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 4 ವಿಶ್ವಕಪ್ ವಿಜೇತ ಬ್ರೆಜಿಲ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ ಕ್ರೊವೇಷಿಯಾ 4-2 ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿತು. ದಾಖಲೆಯ 5ನೇ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದ ಬಲಾಢ್ಯ ಬ್ರೆಜಿಲ್ ಕಣ್ಣೀರಿನೊಂದಿಗೆ ಅಭಿಯಾನ ಅಂತ್ಯಗೊಳಿಸಿತು.
ನಿಗದಿತ 90 ನಿಮಿಷದಲ್ಲಿ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗದಿದ್ದಾಗ 30 ನಿಮಿಷಗಳ ಹೆಚ್ಚುವರಿ ಆಟ ಆಡಿಸಲಾಯಿತು. ಸ್ಟಾರ್ ಪ್ಲೇಯರ್ ನೇಯ್ಮರ್ ಜೂನಿಯರ್ ಕಾಳ್ಚಳಕ ತೋರಿಸಿ 105 ನೇ ನಿಮಿಷದಲ್ಲಿ ಗೋಲು ಬಾರಿಸಿ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿದರು. ಇನ್ನೇನು ಬ್ರೆಜಿಲ್ ಸೆಮೀಸ್ ತಲುಪಿತು ಎಂಬುವಷ್ಟರಲ್ಲಿ ಕ್ರೊವೇಷಿಯಾದ ಬ್ರುನೊ ಪೆಟ್ಕೊವಿಚ್ 116 ನಿಮಿಷದಲ್ಲಿ ಗೋಲು ಗಳಿಸಿ ಆಘಾತ ನೀಡಿದರು. ಹೆಚ್ಚುವರಿ ಸಮಯದಲ್ಲಿ 1-1 ಗೋಲುಗಳಿಂದ ಪಂದ್ಯ ಅಂತ್ಯವಾಯಿತು.
ಶೂಟೌಟ್ ಆದ ಬ್ರೆಜಿಲ್: ಹೆಚ್ಚುವರಿ ಸಮಯದಲ್ಲೂ ಪಂದ್ಯ ಫಲಿತಾಂಶ ಕಾಣದ ಹಿನ್ನೆಲೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಡೊಮಿನಿಕ್ ಲಿವಕೊವಿಚ್ ಎಂಬ ಕ್ರೊವೇಷಿಯಾದ ಭದ್ರಗೋಡೆ ಬ್ರೆಜಿಲ್ ಆಟಗಾರರ ಕೌಶಲ್ಯವನ್ನು ಮೆಟ್ಟಿ ನಿಂತರು. ಮೊದಲ ಪೆನಾಲ್ಟಿ ಶೂಟ್ ಅನ್ನು ವಿಫಲಗೊಳಿಸಿದ ಡೊಮಿನಿಕ್ ಕ್ರೊಷೇಷಿಯಾ ಪಡೆಯಲ್ಲಿ ಸಂತಸ ತಂದರು. ಬಳಿಕ ಇನ್ನೊಂದು ಗೋಲು ತಡೆದು 4-2 ಅಂತರದಲ್ಲಿ ತಂಡವನ್ನು ಗೆಲ್ಲಿಸಿದರು.
4 ಬಾರಿ ಪೆನಾಲ್ಟಿ ಶೂಟೌಟ್ ಗೆದ್ದ ಕ್ರೊವೇಷಿಯಾ: ಪೆನಾಲ್ಟಿ ಶೂಟೌಟ್ನಲ್ಲಿ ಕ್ರೊವೇಷಿಯಾ ಸೋಲರಿಯದೇ ಮುನ್ನುಗ್ಗುತ್ತಿದೆ. ಈ ಬಾರಿಯ ಫಿಫಾ ವಿಶ್ವಕಪ್ನಲ್ಲಿ 2 ಬಾರಿ ಶೂಟೌಟ್ ಗೆದ್ದರೆ, ಒಟ್ಟಾರೆ 4 ನೇ ಬಾರಿ ಜಯ ಸಾಧಿಸಿದೆ. ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ ವಿರುದ್ಧ 3-1 ರಲ್ಲಿ ಗೆಲುವು ಸಾಧಿಸಿದ್ದರೆ, 2018 ರಲ್ಲಿ ಡೆನ್ಮಾರ್ಕ್ ವಿರುದ್ಧ ಪ್ರಿ ಕ್ವಾರ್ಟರ್ನಲ್ಲೇ 3-2, ರಷ್ಯಾ ವಿರುದ್ಧ 4-3 ರಲ್ಲಿ ಗೆಲುವು ಸಾಧಿಸಿದ ದಾಖಲೆ ಬರೆದಿತ್ತು.
ಸೋಲಿನಲ್ಲೂ ದಾಖಲೆ ಬರೆದ ನೇಯ್ಮರ್: ಬ್ರೆಜಿಲ್ ತಂಡದ ಸ್ಟಾರ್ ಫುಟ್ಬಾಲಿಗ ನೇಯ್ಮರ್ ಜೂನಿಯರ್ ಸೋಲಿನಲ್ಲೂ ತಂಡದ ಪರವಾಗಿ ದಾಖಲೆ ಬರೆದರು. ಬ್ರೆಜಿಲ್ ಪರ ಅತಿಹೆಚ್ಚು ಗೋಲು ಗಳಿಸಿದ ಆಟಗಾರರಲ್ಲಿ ನೇಯ್ಮರ್ ಜಂಟಿ ಅಗ್ರಸ್ಥಾನಕ್ಕೇರಿದರು. ಈ ಹಿಂದೆ ಫುಟ್ಬಾಲ್ ದಿಗ್ಗಜ ಪೀಲೆ 77 ಗೋಲುಗಳ ದಾಖಲೆಯನ್ನು ನೇಯ್ಮರ್ ಸರಿಗಟ್ಟಿದರು.
ಓದಿ: ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್: ತಂಡಗಳ ಜೆರ್ಸಿಗೆ ಹೆಚ್ಚುತ್ತಿರೋ ಬೇಡಿಕೆ