ನವದೆಹಲಿ: ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಗೆ ಇದೇ ಮೊದಲ ಬಾರಿಗೆ 5 ಕ್ರೀಡಾಪಟುಗಳನ್ನ ಆಯ್ಕೆ ಮಾಡಿರುವುದಕ್ಕೆ ಹಾಗೂ ಒಟ್ಟಾರೆ 74 ಮಂದಿಯನ್ನು ವಿವಿಧ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸಮರ್ಥಿಸಿಕೊಂಡಿದ್ದಾರೆ.
ಈ ವರ್ಷ ಕ್ರೀಡಾ ಸಚಿವಾಲಯದ ಆಯ್ಕೆ ಸಮಿತಿ ರೋಹಿತ್ ಶರ್ಮಾ ಸಹಿತ 5 ಮಂದಿಯನ್ನು ಖೇಲ್ ರತ್ನ ಪ್ರಶಸ್ತಿಗೆ, 27 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ, ದ್ರೋಣಾಚಾರ್ಯ ಪ್ರಶಸ್ತಿಯನ್ನು 13 ಕೋಚ್ಗಳಿಗೆ ಹಾಗೂ ಧ್ಯಾನ್ಚಂದ್ ಪ್ರಶಸ್ತಿಗೆ 15 ಮಂದಿ ಕೋಚ್ಗಳನ್ನು ನಾಮನಿರ್ದೇಶನ ಮಾಡಿತ್ತು. ಈ ಎಲ್ಲರಿಗೂ ಕೇಂದ್ರ ಕ್ರೀಡಾ ಇಲಾಖೆ ಪ್ರಶಸ್ತಿಯನ್ನು ಅನುಮೋದನೆ ಮಾಡಿದ್ದು, ಇಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಹೆಚ್ಚು ಕ್ರೀಡಾ ಪ್ರಶಸ್ತಿಗಳನ್ನು ನೀಡುತ್ತಿರುವುದನ್ನು ಕಿರಣ್ ರಿಜಿಜು ಸಮರ್ಥಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಅಥ್ಲೀಟ್ಗಳ ಪ್ರದರ್ಶನ ಈ ವರ್ಷ ಉತ್ತಮವಾಗಿದೆ. ಯಾವಾಗ ನಮ್ಮ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಾರೋ ಅವರೆಲ್ಲರನ್ನು ಗುರುತಿಸಿ ಬಹುಮಾನ ನೀಡಬೇಕು. ಸರ್ಕಾರವು ಅವರ ಸಾಧನೆಗಳನ್ನು ಗುರುತಿಸದಿದ್ದರೆ ಅದು ನಮ್ಮಲ್ಲಿರುವ ಪ್ರತಿಯೊಬ್ಬ ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ನಿರುತ್ಸಾಹಗೊಳಿಸಿದಂತಾಗುತ್ತದೆ ಎಂಬುದು ಕೀಡಾ ಸಚಿವರ ಸಮರ್ಥನೆಯಾಗಿದೆ.
ಆದ್ದರಿಂದ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ಗಣನೀಯವಾಗಿ ಏರಿದೆ. ಇದರ ಪರಿಣಾಮವಾಗಿ ಪ್ರಶಸ್ತಿ ವಿಜೇತರ ಸಂಖ್ಯೆಯೂ ಹೆಚ್ಚಾಗಿದೆ ಎಂದಿದ್ದಾರೆ.
ಇದಲ್ಲದೆ ಈ ಕ್ರೀಡಾಪಟುಗಳನ್ನು ಆಯ್ಕೆ ಮಾಡಿರುವುದು ಸುಪ್ರೀಂಕೋರ್ಟ್ ನ್ಯಾಯಾಧೀಶರು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವ ಪ್ರಸಿದ್ಧ ಕ್ರೀಡಾಪಟುಗಳಾಗಿದ್ದಾರೆ. ಅವರೆಲ್ಲರೂ ದೀರ್ಘವಾದ ಚರ್ಚೆ ನಡೆಸಿದ ನಂತರ ವಿಜೇತರ ಆಯ್ಕೆ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.